ಬೆಂಗಳೂರು:ಮತ್ತೋರ್ವ ಜೆಡಿಎಸ್ ನಾಯಕ ಕಾಂಗ್ರೆಸ್ ಸೇರ್ಪಡೆಯಾಗುವ ಒಲವು ತೋರಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನ ಕಳೆದುಕೊಂಡು ತೆನೆ ಪಕ್ಷದಲ್ಲಿ ಕೇವಲ ಶಾಸಕರಾಗಿ ಮಾತ್ರ ಉಳಿದುಕೊಂಡಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಬಲವಾದ ಸೂಚನೆ ನೀಡಿದ್ದಾರೆ.
ಹಲವು ಜೆಡಿಎಸ್ ನಾಯಕರು ಬಿಜೆಪಿಗಿಂತ ಕಾಂಗ್ರೆಸ್ ಅನ್ನು ತಮ್ಮ ಉತ್ತಮ ಆಯ್ಕೆ ಎಂದು ಪರಿಗಣಿಸುತ್ತಿದ್ದರು, ಅದರಂತೆ ಮಧು ಬಂಗಾರಪ್ಪ ಅವರ ಹಾದಿಯನ್ನೇ ತುಳಿದಿದ್ದಾರೆ. ಶೀಘ್ರವೇ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು ಇಂದು ಅದಕ್ಕೆ ಪುಷ್ಟಿ ನೀಡುವ ಬೆಳವಣಿಗೆ ನಡೆದಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ ಜೆಡಿಎಸ್ ನಾಯಕ ಮಧು ಬಂಗಾರಪ್ಪ ಸುದೀರ್ಘ ಚರ್ಚೆ ನಡೆಸಿದ್ದಾರೆ. ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ತೊಡಗಿರುವ ಡಿಕೆ ಶಿವಕುಮಾರ್ ಪಕ್ಷದ ಚಟುವಟಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇದರ ನಡುವೆಯೂ ಇಂದು ಮಧುಬಂಗಾರಪ್ಪ ಭೇಟಿಗೆ ಸಮಯ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಂದು ವಾರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ.
ಸ್ಥಾನ ಕಳೆದುಕೊಂಡು ಬೇಸರ:ಮಧು ಬಂಗಾರಪ್ಪ ಕಳೆದ ಕೆಲ ತಿಂಗಳಿಂದ ಪಕ್ಷದಲ್ಲಿ ತಟಸ್ಥರಾಗಿ ಉಳಿದಿದ್ದರು ಇವರನ್ನು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿಯನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಇದರಿಂದ ಇನ್ನಷ್ಟು ಬೇಸರಗೊಂಡಿರುವ ಅವರು ಪಕ್ಷ ತ್ಯಜಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ತಂದೆ ಎಸ್. ಬಂಗಾರಪ್ಪ ಅವರಿಗೆ ರಾಜಕೀಯದಲ್ಲಿ ಸಾಕಷ್ಟು ಬೆಳೆಯುವ ಅವಕಾಶ ಕಲ್ಪಿಸಿದ್ದ ಕಾಂಗ್ರೆಸ್ ಪಕ್ಷದತ್ತ ಮಧು ಬಂಗಾರಪ್ಪ ಮುಖ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಮತ್ತೊಮ್ಮೆ ರಾಜಕೀಯ ನೆಲೆ ಕಂಡುಕೊಳ್ಳುವ ಹಾಗೂ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿರುವ ಸೋದರ ಕುಮಾರ್ ಬಂಗಾರಪ್ಪ ವಿರುದ್ಧ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧಿ ರಾಷ್ಟ್ರೀಯ ಪಕ್ಷವೊಂದರ ಕದ ತಟ್ಟುವುದು ಮಧು ಬಂಗಾರಪ್ಪಗೆ ಅನಿವಾರ್ಯವಾಗಿದೆ.
ಹಳಸಿದ ಸೋದರ ಸಂಬಂಧ:ಈಗಾಗಲೇ ಬಿಜೆಪಿಯಲ್ಲಿ ನೆಲೆಗೊಂಡಿರುವ ಕುಮಾರ್ ಬಂಗಾರಪ್ಪ ಜೊತೆ ವೈಯಕ್ತಿಕವಾಗಿ ಸಂಬಂಧ ಹಳಸಿದೆ. ಈ ಹಿನ್ನೆಲೆ ಜೆಡಿಎಸ್ ನಲ್ಲಿ ಭವಿಷ್ಯ ಹುಡುಕಿಕೊಳ್ಳಲಾಗದೆ, ಮುಂದಿನ ಚುನಾವಣೆ ಹೊತ್ತಿಗೆ ಸುಭದ್ರ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಧು ಬಂಗಾರಪ್ಪ ಕೊನೆಗೂ ಕಾಂಗ್ರೆಸ್ ಪಕ್ಷದಲ್ಲಿ ನೆಲೆಕಂಡುಕೊಳ್ಳಲು ಮುಂದಾಗಿದ್ದು, ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಬಳಿಕ ದಿನಾಂಕ ನಿಗದಿ ಮಾಡಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.