ಬೆಂಗಳೂರು:ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಂದು ಕಾಲದ ಗೆಳೆಯರೇ ಈಗ ಶತ್ರುಗಳಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರದ ಜಿದ್ದು ಕಿಡಿ ಹೊತ್ತಲು ಕಾರಣ ಎನ್ನಲಾಗ್ತಿದೆ. ಅಲ್ಲದೇ, ಈ ಘಟನೆ ಹಿಂದೆ ಮಾಜಿ ಡಾನ್ ಪುತ್ರನ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅ.19ರ ಮಧ್ಯರಾತ್ರಿ 12.30ರ ವೇಳೆ ಆರ್.ಎಂ.ವಿ ಬಡಾವಣೆಯ ಸಪ್ತಗಿರಿ ಅಪಾರ್ಟ್ ಮೆಂಟ್ ಬೇಸ್ಮೆಂಟ್ನಲ್ಲಿ ನಿಲ್ಲಿಸಲಾಗಿದ್ದ ಐಷಾರಾಮಿ ರೇಂಜ್ ರೋವರ್ ಕಾರು ಧಗಧಗನೇ ಹೊತ್ತು ಉರಿದಿತ್ತು. ಮುಸುಕು ಹಾಕಿಕೊಂಡು ಬಂದಿದ್ದ ಕಿಡಿಗೇಡಿಗಳು ಅಂದುಕೊಂಡ ಕೆಲಸ ಮುಗಿಸಿ ಹೊರಟು ಹೋಗಿದ್ದರು. ನೋಡ ನೋಡುತ್ತಲೇ ಸಂಪೂರ್ಣ ಕಾರು ಸುಟ್ಟು ಕರಕಲಾಗಿತ್ತು. ಸುಟ್ಟು ಕರಕಲಾದ ಕಾರು ರಿಯಲ್ ಎಸ್ಟೇಟ್ ಡೆವಲಪರ್ ಕಂ ಪ್ರಮೋಟರ್ ಆಗಿರುವ ಶ್ರೀನಿವಾಸ್ ನಾಯ್ಡು ಎಂಬುವರಿಗೆ ಸೇರಿದ್ದಾಗಿತ್ತು.
ಸಪ್ತಗಿರಿ ಅಪಾರ್ಟ್ ಮೆಂಟ್.. ದುರಸ್ತಿ ಕಾರ್ಯ ಮಾಜಿ ಡಾನ್ ಪುತ್ರನ ಕೈವಾಡ ಶಂಕೆ?
ಉದ್ಯಮಿ ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮಾಜಿ ಡಾನ್ ಪುತ್ರನ ಕೈವಾಡ ಇದೆ ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ರಷ್ಯಾದಲ್ಲಿದ್ದ ಮಾಜಿ ಡಾನ್ ಪುತ್ರ, ರಷ್ಯಾದಿಂದಲೇ ಕಾರಿಗೆ ಬೆಂಕಿ ಹಚ್ಚಲು ಹೇಳಿದ್ದ ಎನ್ನಲಾಗ್ತಿದೆ.
ಮಾಜಿ ಡಾನ್ ಪುತ್ರ ಮತ್ತು ಶ್ರೀನಿವಾಸ್ ನಾಯ್ಡು ಇಬ್ಬರು ಆ ಕಾಲದ ಗೆಳೆಯರು. ಇಬ್ಬರ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು. ಇದರಲ್ಲಿ ನನಗೆ ಒಂದೂವರೆ ಕೋಟಿ ಕೊಡಬೇಕು ಎಂದು ಮಾಜಿ ಡಾನ್ ಪುತ್ರ ಹಠಕ್ಕೆ ಬಿದ್ದಿದ್ದನಂತೆ. ಇದಕ್ಕೆ ಆಗಲ್ಲ ಎಂದಿದ್ದ ಶ್ರೀನಿವಾಸ್ ನಾಯ್ಡುಗೆ ಸಾಕಷ್ಟು ಬಾರಿ ಬೆದರಿಕೆ ಕೂಡ ಹಾಕಿದ್ದನಂತೆ. ಇದೇ ಕಾರಣಕ್ಕೇ ರಿವೇಂಜ್ ತೀರಿಸಲು ಬೆಂಕಿ ಹಚ್ಚಲು ಮಾಜಿ ಡಾನ್ ಪುತ್ರ ಹೇಳಿದ್ದ ಎನ್ನಲಾಗ್ತಿದೆ. ಘಟನೆ ಒಂದು ವಾರದ ಹಿಂದೆ ನಡೆದಿದ್ದು, ಆ ಡಾನ್ ಪುತ್ರ ಎರಡು ದಿನಗಳ ಹಿಂದೆ ನಗರಕ್ಕೆ ರಷ್ಯಾದಿಂದ ವಾಪಸ್ ಆಗಿದ್ದಾನೆ ಎನ್ನಲಾಗ್ತಿದೆ.
ಘಟನೆಯಲ್ಲಿ ಕಾರು ಮಾತ್ರವಲ್ಲದೇ ಬೆಂಕಿಯ ಕೆನ್ನಾಲಿಗೆಗೆ 4 ಅಂತಸ್ತಿನ ಇಡೀ ಮಹಡಿಗೂ ಬೆಂಕಿ ವ್ಯಾಪಿಸಿ, ಪೀಠೋಪಕರಣ ಸುಟ್ಟು ಹೋಗಿವೆ. ವಿದ್ಯುತ್ ವೈರ್ಗಳು ಸುಟ್ಟುಹೋಗಿವೆ. ಸದ್ಯ ಅದೆಲ್ಲವನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ, ಮನೆಗೂ ಹಾನಿ