ಬೆಂಗಳೂರು: ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಮೇ 1 ರಂದು ಸೇನಾ ಸಿಬ್ಬಂದಿ ಮುಂದಿನ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಲೆಫ್ಟಿನೆಂಟ್ ಜನರಲ್ ರಾಜು ಅವರು ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಅವರು ಶನಿವಾರ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರ ಅವಧಿಯನ್ನು ಪೂರ್ಣಗೊಳಿಸಿದ ನಂತರ 1.3 ಮಿಲಿಯನ್ ಸೈನ್ಯದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
ಲೆಫ್ಟಿನೆಂಟ್ ಜನರಲ್ ರಾಜು ಅವರು ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪೂರ್ವ ಲಡಾಖ್‌ನಲ್ಲಿ ಸೇನೆಯ ಒಟ್ಟಾರೆ ಕಾರ್ಯಾಚರಣೆ ಸಿದ್ಧತೆಯನ್ನು ನೋಡಿಕೊಳ್ಳುತ್ತಾರೆ. ಸೈನಿಕ್ ಸ್ಕೂಲ್ ಬಿಜಾಪುರ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಆಗಿರುವ ರಾಜು 1984 ಡಿಸೆಂಬರ್ 15ರಂದು ಜಾಟ್ ರೆಜಿಮೆಂಟ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು. ವೆಸ್ಟರ್ನ್ ಥಿಯೇಟರ್‌ನಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಪಿ ಪರಾಕ್ರಮ್ ಸಮಯದಲ್ಲಿ ಅವರು ತಮ್ಮ ಬೆಟಾಲಿಯನ್‌ನ ನೇತೃತ್ವ ವಹಿಸಿದ್ದರು.
ಸಿಎಂ ಅಭಿನಂದನೆ:ಬಗ್ಗವಳ್ಳಿ ಸೋಮಶೇಖರ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ. ಕನ್ನಡಿಗರೆಲ್ಲರಿಗೂ ಇದು ಹೆಮ್ಮೆಯ ಕ್ಷಣ ಮತ್ತು ಸಂಭ್ರಮದ ಸಂದರ್ಭವಾಗಿದೆ. ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಜನರಲ್ ಬಿ.ಎಸ್.ರಾಜು ಅವರು ರಾಷ್ಟ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಸೇನಾ ಸಿಬ್ಬಂದಿಯ ಹೊಸ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಅವರಿಗೆ ಅಭಿನಂದನೆಗಳು ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.