ಬೆಂಗಳೂರು: ನಗರದ ರಸ್ತೆಗಳನ್ನು ಹೈಟೆಕ್ ಮಾಡುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ವೈಟ್ ಟಾಪಿಂಗ್ ಕಾಂಕ್ರೀಟ್ ರಸ್ತೆ ಪರಿಚಯಿಸಿತು. ಆದ್ರೆ ಒಂದು ಕಿ.ಲೋ ಮೀಟರ್ಗೆ ಹನ್ನೊಂದು ಕೋಟಿ ರೂ. ಖರ್ಚು ಮಾಡಿ ನಡೆಸುತ್ತಿರುವ ಈ ವೈಟ್ ಟಾಪಿಂಗ್ ರಸ್ತೆ ದೊಡ್ಡ ಹಗರಣದ ಕೂಪ ಎಂದು ತನಿಖೆಗೆ ಆದೇಶಿಸಿರುವ ಬಿಜೆಪಿ ಸರ್ಕಾರ ಮತ್ತೊಂದು ಸವಾಲು ಹಾಕಿದೆ.
ವೈಟ್ ಟಾಪಿಂಗ್ ಮಾದರಿಯಲ್ಲೇ ಕಡಿಮೆ ವೆಚ್ಚದ ರಸ್ತೆ ಕಾಮಗಾರಿ ಕಾಂಗ್ರೆಸ್ ಸರ್ಕಾರ ಪರಿಚಯಿಸಿದ ಮಾದರಿಯ ವೈಟ್ ಟಾಪಿಂಗ್ ರಸ್ತೆಗಳನ್ನು ಹನ್ನೊಂದು ಕೋಟಿ ರೂ ವೆಚ್ಚಕ್ಕೆ ಬದಲಾಗಿ, ಕೇವಲ 5 ಕೋಟಿ ರೂ.ಗಳಲ್ಲಿ ಕಾಮಗಾರಿ ಮಾಡಿ ಮುಗಿಸುವ ಚಾಲೆಂಜ್ ಮಾಡಿದೆ. ಇದಕ್ಕಾಗಿ 50 ಕೋಟಿ ರೂ ಮೀಸಲಿಟ್ಟು, ಹಳೆಯ ಸರ್ಕಾರ ನೀಡಿದ್ದ 1,700 ಕೋಟಿ ರೂ. ಅನುದಾನವನ್ನು ಕಡಿತಗೊಳಿಸಿದೆ.
ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡ ಎನ್ ಆರ್ ರಮೇಶ್, ನಮ್ಮ ವಾರ್ಡ್ನಲ್ಲೇ ಈ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಆರಂಭಿಸುತ್ತಿದ್ದು, 5 ಕೋಟ ರೂ. ವೆಚ್ಚದಲ್ಲಿ ಯಡಿಯೂರು ವಾರ್ಡ್ನಲ್ಲಿ ರಸ್ತೆ ಸರಿಪಡಿಸಲಾಗುವುದು. ಈ ಹಿಂದಿನ ಸರ್ಕಾರ ಉಸ್ತುವಾರಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಪರ್ಸೆಂಟೇಜ್ ಕೊಡಲು ಹೋಗಿ ಜನರ ತೆರಿಗೆ ಹಣ ಪೋಲು ಮಾಡಿದೆ. ಅದಕ್ಕಾಗಿಯೇ ಸಿದ್ಧರಾಮಯ್ಯ ಸರ್ಕಾರದ ಈ ಹಗರಣವನ್ನು ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ ಎಂದರು.
ಹೊಸ ವೈಟ್ ಟಾಪಿಂಗ್ ರಸ್ತೆಯು 8 ಇಂಚು ದಪ್ಪದ ಕಾಂಕ್ರೀಟ್, ಓಎಫ್ಸಿ ಕೇಬಲ್ಗಳು, ಚರಂಡಿ, ಕುಡಿಯುವ ನೀರಿನ ಸಂಪರ್ಕಗಳನ್ನು ಹೊಂದಿದೆ. ಜೊತೆಗೆ ಮಳೆ ನೀರು ಇಂಗುಗುಂಡಿ, ಕುಳಿತುಕೊಳ್ಳಲು ಗ್ರಾನೈಟ್ ಆಸನಗಳನ್ನೂ ಮಾಡಿ ಎರಡು ತಿಂಗಳಲ್ಲಿ ಪೂರ್ಣ ಮಾಡಲಾಗುವುದು ಎಂದರು.
ನಗರದಲ್ಲಿ ಕೆಲವೆಡೆ ಬ್ಲಾಕ್ ಟಾಪಿಂಗ್ ರಸ್ತೆ ನಿರ್ಮಾಣ:
ನಗರದಲ್ಲಿ ಅಗತ್ಯ ಇರುವ ಕಡೆ ಬ್ಲಾಕ್ ಟಾಪಿಂಗ್ ಮಾಡಲಾಗುವುದು. ಆದರೆ ದೊಡ್ಡ ಹಗರಣವಾದ ವೈಟ್ ಟಾಪಿಂಗ್ ದಂಧೆಯನ್ನು ಈ ಸರ್ಕಾರ ತಡೆ ಹಿಡಿದಿದೆ. ಡಾಂಬಾರ್ ಮಿಕ್ಸ್‌ನಲ್ಲಿ ಪ್ಲಾಸ್ಟಿಕ್ ಅಂಶ, ಜಲ್ಲಿ ಇರಬಹುದು ಎಲ್ಲದಕ್ಕೂ ಅಳತೆ ಇದೆ. ರಸ್ತೆಗಳು ಹೆಚ್ಚು ಬಾಳ್ವಿಕೆ ಬರುವ ರೀತಿ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಶಾಸಕ ಸತೀಶ್ ಕುಮಾರ್ ಹೇಳಿದರು.
ಇನ್ನು ಆಡಳಿತ ಪಕ್ಷದ ನಾಯಕ ವಾಜಿದ್ ಪ್ರತಿಕ್ರಿಯಿಸಿ, ಮೊದಲನೇ ಹಂತ, ಎರಡನೇ ಹಂತದ ವೈಟ್ ಟಾಪಿಂಗ್ ತನಿಖೆಗೆ ನೀಡಿದ್ದಾರೆ. ಮೂರನೇ ಹಂತವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದ್ದಾರೆ. ಆದರೆ ಕೆಲವೆಡೆ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತವಾಗಿದ್ದು, ಇವು ಜನರಿಗೆ ಸಮಸ್ಯೆಯಾಗಲಿದೆ. ರಸ್ತೆಗುಂಡಿ ಸಮಸ್ಯೆಗಳ ನಿರ್ವಹಣೆಗೆ ವೈಟ್ ಟಾಪಿಂಗ್ ತರಲಾಗಿತ್ತು. ಇದು ಬೇರೆ ರಾಜ್ಯಗಳಿಗೂ ಮಾದರಿಯಾಗಿತ್ತು. ಆದರೆ ಸರ್ಕಾರ ಈಗ ಬ್ಲಾಕ್ ಟಾಪಿಂಗ್ ಮಾಡಲು ಹೊರಟಿದೆ. ಇದು ಹದಿನಾಲ್ಕುವರೆ ಕೋಟಿ ಖರ್ಚು ಮಾಡುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದು ಇನ್ನೂ ದುಬಾರಿಯಾಗಲಿದೆ ಎಂದರು.