ಬೆಂಗಳೂರು :ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೋಕಸಭೆ ಸ್ಪೀಕರ್ ಒಬ್ಬರು ಸಂಸದೀಯ ಮೌಲ್ಯವನ್ನು ಉದ್ದೇಶಿಸಿ ವಿಧಾನಸಭೆಯಲ್ಲಿ ಭಾಷಣ ಮಾಡಿದ ಕೀರ್ತಿಗೆ ಓಂ ಬಿರ್ಲಾ ಪಾತ್ರರಾಗಿದ್ದಾರೆ.
ಅಮೃತ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಸಂಸದೀಯ ಮೌಲ್ಯಗಳ ರಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಲೋಕಸಭೆ ಸಭಾಧ್ಯಕ್ಷರಾಗಿರುವ ಓಂಬಿರ್ಲಾ ಅವರು ಕಾರ್ಯಕ್ರಮಕ್ಕೆ ಆಗಮಿಸಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ವಿಧಾನಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭಾಗಿಯಾಗಿದ್ದರು.
'ಈವರೆಗೆ ರಾಷ್ಟ್ರಪತಿ, ರಾಜ್ಯಪಾಲರಿಂದ ಭಾಷಣ'
ಸ್ಪೀಕರ್ ಆಸನದಲ್ಲಿ ಕುಳಿತು ಉಭಯ ಸದನಗಳನ್ನ ಉದ್ದೇಶಿಸಿ ಭಾಷಣ ಮಾಡಿದ ಓಂ ಬಿರ್ಲಾ ರಾಜ್ಯದ ಇತಿಹಾಸದಲ್ಲೇ ಮೊದಲಿಗರಾಗಿ ಗುರುತಿಸಿಕೊಂಡರು. ಈವರೆಗೂ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ವಿಧಾನಸಭೆಗೆ ಆಗಮಿಸಿ ಭಾಷಣ ಮಾಡಿದ ಉದಾಹರಣೆ ಇತ್ತು. ಆದರೆ, ಲೋಕಸಭೆ ಸಭಾಧ್ಯಕ್ಷರು ಆಗಮಿಸಿದ್ದು ಇದೇ ಮೊದಲು.
ಪ್ರಜಾಪ್ರಭುತ್ವದಲ್ಲಿ ಸಂಸದೀಯ ಮೌಲ್ಯಗಳ ರಕ್ಷಣೆ ವಿಷಯ ಸಂಬಂಧ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಸ್ಪೀಕರ್ ಓಂ ಬಿರ್ಲಾ ಅವರು ಭಾಷಣ ಮಾಡಿದರು. ಸಾಮಾನ್ಯವಾಗಿ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಪ್ರತಿವರ್ಷ ರಾಜ್ಯಪಾಲರು ಭಾಷಣ ಮಾಡುತ್ತಾರೆ. ಇದನ್ನು ಹೊರತುಪಡಿಸಿದರೆ ರಾಷ್ಟ್ರಪತಿಗಳಾಗಿದ್ದ ಸಂದರ್ಭ ಅಬ್ದುಲ್ ಕಲಾಂ ಒಮ್ಮೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು.
ಈಗಿನ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಸಹ ಒಮ್ಮೆ ವಿಧಾನಸಭೆಗೆ ಆಗಮಿಸಿ ಭಾಷಣ ಮಾಡಿದ್ದರು. ಈ ಸಂದರ್ಭ ಟಿಪ್ಪುವನ್ನು ಹಾಡಿ ಹೊಗಳಿದ್ದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಸಂಸದೀಯ ಮೌಲ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ರಚನೆ ಆಗಿರುವ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಸಮಿತಿಯಲ್ಲಿ ಸದಸ್ಯರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾರಂಭ ಆಯೋಜಿಸಿ ಓಂ ಬಿರ್ಲಾ ಅವರನ್ನ ಕರೆಸುವಲ್ಲಿ ಸಫಲರಾಗಿದ್ದಾರೆ. ವಿಧಾನಸಭೆ ಸಭಾಧ್ಯಕ್ಷರ ಪ್ರಯತ್ನ ರಾಜ್ಯದಲ್ಲಿ ಒಂದು ಹೊಸ ಇತಿಹಾಸಕ್ಕೆ ಕಾರಣವಾಗಿದೆ.