ಬೆಂಗಳೂರು:ಲಾಕ್‍ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗೃಹ ಕಾರ್ಮಿಕರಿಗೆ ಅಥವಾ ಮನೆಗೆಲಸದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಪರಿಹಾರ ಪ್ಯಾಕೇಜ್ ನ ಹಣ ಪಡೆದುಕೊಳ್ಳಲು ನೊಂದಾಯಿಸಿಕೊಳ್ಳಬೇಕಾದ ವಿಧಾನಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ,ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ, ಆಧಾರ್ ಕಾರ್ಡ್ ಇದ್ದವರಿಗೆ ಯೋಜನೆಯ ಲಾಭ ಸಿಗಲಿದೆ. ಪರಿಹಾರ ಪಡೆದುಕೊಳ್ಳಲು ಸೇವಾಸಿಂಧು ಪೋರ್ಟಲ್ನಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು.
ಅಥವಾ ಗ್ರಾಮ ಪಂಚಾಯಿತಿ ಕಚೇರಿ, ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ ಅಖವಾ ನಗರ ಪ್ರದೇಶಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೂ ಭೇಟಿ ಕೊಟ್ಟು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ವಿವರಿಸಿದರು.
ಪ್ರಮಾಣಪತ್ರ ಪರಿಶೀಲಿಸಿದ ಪೀಠ ಪ್ಯಾಕೇಜ್ ಘೋಷಣೆ ಬಗ್ಗೆ ಸರ್ಕಾರ ಮಾಡಿದ ಪ್ರಚಾರ ಹಾಗೂ ಪ್ರಕಟಿಸಿದ ಜಾಹೀರಾತುಗಳಲ್ಲಿ ಗ್ರಾ.ಪಂ ಕಚೇರಿ. ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಕುರಿತು ಉಲ್ಲೇಖವೇ ಇಲ್ಲ. ಸರ್ಕಾರದ ಪ್ರಚಾರದ ವೈಖರಿ ಗಮನಿಸಿದರೆ ಎಲ್ಲಾ ಗೃಹ ಕಾರ್ಮಿಕರು ಇಂಟರ್ ನೆಟ್ ಬಳಸುವವರು, ಮಾಹಿತಿ ತಂತ್ರಜ್ಞಾನದ ಅರಿವು ಹೊಂದಿದ್ದಾರೆ ಎಂಬಂತಿದೆ.
ಆದರೆ, ವಾಸ್ತವ ಹಾಗಿಲ್ಲ. ಆದ್ದರಿಂದ, ಸೇವಾಸಿಂಧು ಪೋರ್ಟಲ್ ಹೊರತಾಗಿ ಗೃಹ ಕಾರ್ಮಿಕರು ಗ್ರಾಮ ಪಂಚಾಯ್ತಿ ಕಚೇರಿ, ತಾಲೂಕು ಕಾರ್ಮಿಕರ ನಿರೀಕ್ಷಕರ ಕಚೇರಿ ಹಾಗೂ ನಗರ ಪ್ರದೇಶಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೂ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂಬ ಬಗ್ಗೆ ಸರ್ಕಾರ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಅಲ್ಲದೇ ಅರ್ಜಿದಾರ ಸಂಘಟನೆಯ ಪ್ರತಿನಿಧಿಗಳು ಕೇಂದ್ರಗಳಿಗೆ ಭೇಟಿ ಕೊಟ್ಟು ಸರ್ಕಾರ ಹೇಳಿರುವ ವ್ಯವಸ್ಥೆ ಲಭ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.