ಬೆಂಗಳೂರು: ಕೊರೊನಾ ಎರಡನೇ ಅಲೆಯ ಕರಾಳತೆ ಹೆಚ್ಚಾಗುತ್ತಿದೆ. ಎರಡನೇ ಅಲೆಯ ಬೆನ್ನಲ್ಲೇ ಲಾಕ್‌ಡೌನ್ ಎಂಬ ಭೀಕರತೆಯೂ ಮರುಕಳಿಸುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ವೀಕೆಂಡ್ ಲಾಕ್‌ಡೌನ್ ಘೋಷಿಸಿದೆ. ಕಾರ್ಮಿಕರಲ್ಲಿ ಇದೀಗ ಮತ್ತೆ ಅದೇ ಲಾಕ್‌ಡೌನ್ ಭೀತಿ ಎದುರಾಗಿದ್ದು, ಆತಂಕ, ಅನಿಶ್ಚಿತತೆ ಮನೆ ಮಾಡಿದೆ.
ಕಳೆದ ಬಾರಿಯಂತಲ್ಲವಾದರೂ ನಿಧಾನವಾಗಿ ರಾಜ್ಯದ ಅದರಲ್ಲೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಕಾರ್ಮಿಕರಲ್ಲಿ ಭೀತಿ ಹೆಚ್ಚಾಗುತ್ತಿದ್ದು, ತಮ್ಮ ರಾಜ್ಯಗಳಿಗೆ ಮತ್ತೆ ಗುಳೇ ಹೋಗುವ ದೃಶ್ಯ ಕಂಡು ಬರುತ್ತಿದೆ. ಆದರೆ ಕಳೆದ ವರ್ಷದ ಲಾಕ್‌ಡೌನ್ ಅತ್ಯಂತ ಸಂಕಷ್ಟಕ್ಕೆ ಸಿಲುಕಿಸಿದ್ದು ಕಾರ್ಮಿಕರನ್ನ. ಕಳೆದ ಲಾಕ್‌ಡೌನ್ ಬರೆಗೆ ಲಕ್ಷಾಂತರ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಲಸೆ ಹೋಗಿದ್ದರು. ಅನ್ ಲಾಕ್ ಆದ ನಂತರ ನಿಧಾನವಾಗಿ ತಮ್ಮ ಊರುಗಳಿಗೆ ಮರಳಿದ್ದ ಕಾರ್ಮಿಕರು ವಾಪಸು ರಾಜ್ಯಕ್ಕೆ ಬರಲು ಪ್ರಾರಂಭಿಸಿದರು.
ಕಾರ್ಮಿಕರು ಗುಳೇ ಹೋಗಿದ್ದೆಷ್ಟು; ಮರಳಿದ್ದೆಷ್ಟು?
ಮೊದಲ ಲಾಕ್‌ಡೌನ್ ಅತ್ಯಂತ ಭೀಕರವಾಗಿ ಕಾಡಿದ್ದು ಕಾರ್ಮಿಕ ವರ್ಗದವರನ್ನು. ಮೂರು ತಿಂಗಳ ಸುದೀರ್ಘ ಲಾಕ್‌ಡೌನ್ ನಿಂದ ಕಂಗಾಲಾದ ಕಾರ್ಮಿಕರು ರಾಜ್ಯದಿಂದ ದೊಡ್ಡ ಮಟ್ಟಿಗೆ ತಮ್ಮ ರಾಜ್ಯಗಳಿಗೆ ಗುಳೇ ಹೋಗಿದ್ದರು. ಹಲವರು ವಾಹನ ಇಲ್ಲದೆ ಕಾಲ್ನಡಿಗೆಯಲ್ಲೇ ದಿನಗಟ್ಟಲೆ ಕ್ರಮಿಸಿ ತಮ್ಮ ಊರುಗಳಿಗೆ ಹೋದ ಹೃದಯ ವಿದ್ರಾವಕ ದೃಶ್ಯ ಇನ್ನೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಇದನ್ನೂ ಓದಿ: ಕೊವ್ಯಾಕ್ಸಿನ್ ಬೆಲೆ ನಿಗದಿ: ಖಾಸಗಿ ಆಸ್ಪತ್ರೆಗೆ 1,200 ರೂ., ರಾಜ್ಯ ಸರ್ಕಾರಗಳಿಗೆ 600 ರೂ.!
ಹೀಗೆ ರಾಜ್ಯದಿಂದ ಕಳೆದ ಬಾರಿ ಸುಮಾರು 30 ಲಕ್ಷ ಕಾರ್ಮಿಕರು ವಾಪಸು ತಮ್ಮ ಊರುಗಳಿಗೆ ಗುಳೇ ಹೋಗಿದ್ದರು ಎಂದು ಅಂದಾಜಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಹೈ ಕೋರ್ಟಿಗೆ ನೀಡಿದ ವರದಿಯಲ್ಲಿ ಕಳೆದ ವರ್ಷ ಮಾರ್ಚ್ ನಿಂದ ಜೂನ್ ವರೆಗೆ ಸುಮಾರು 4.16 ಲಕ್ಷ ಕಾರ್ಮಿಕರು ಗುಳೇ ಹೋಗಿರುವ ಅಂಕಿಅಂಶ ನೀಡಿತ್ತು. ಕಾರ್ಮಿಕ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯಂತೆ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಅಂದಾಜು 4,66,582 ಕಾರ್ಮಿಕರು ಗುಳೇ ಹೋಗಿದ್ದರು. ನಿಖರವಾದ ಮಾಹಿತಿಯನ್ನು ಪಡೆಯಲು ಕಾರ್ಮಿಕ ಇಲಾಖೆಯಿಂದ ಯಾವುದೇ ಸಮೀಕ್ಷೆ ನಡೆಸಿಲ್ಲ. ಈ ಕಾರಣಕ್ಕಾಗಿ ವಲಸೆ ಕಾರ್ಮಿಕರ ನಿಖರವಾದ ಸಂಖ್ಯೆಯ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇನ್ನು ಕೋವಿಡ್-19 ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದವರ ಸಂಖ್ಯೆ ಅಂದಾಜು 1,77,526 ಎಂಬ ಮಾಹಿತಿ ನೀಡಿದ್ದಾರೆ.
ರಾಜ್ಯಕ್ಕೆ ವಾಪಸಾದವರು ಎಷ್ಟು?
ಜೂನ್ ತಿಂಗಳಲ್ಲಿ ಅನ್ಲಾಕ್ ಆದ ಬಳಿಕ ನಿಧಾನವಾಗಿ ಗುಳೇ ಹೋಗಿದ್ದ ಕಾರ್ಮಿಕ ವರ್ಗ ಮರಳಲು ಪ್ರಾರಂಭವಾಯಿತು. ಆದರೂ ಕೋವಿಡ್ ಅನಿಶ್ಚಿತತೆ, ಲಾಕ್‌ಡೌನ್ ಕೊಟ್ಟ ನೋವಿನಿಂದ ಚೇತರಿಸಿಕೊಳ್ಳದ ಕಾರ್ಮಿಕರ ಮರಳುವಿಕೆಯ ಪ್ರಮಾಣ ನಿಧಾನಗತಿಯಲ್ಲಿದೆ. ಕಾರ್ಮಿಕ ಇಲಾಖೆ ಹೇಳುವ ಪ್ರಕಾರ ಗುಳೇ ಹೋದ ಕಾರ್ಮಿಕರಲ್ಲಿ ಈವರೆಗೆ ಸುಮಾರು 40% ಕಾರ್ಮಿಕರು ರಾಜ್ಯಕ್ಕೆ ವಾಪಸಾಗಿದ್ದಾರೆ. ಅಂದರೆ ಅನ್‌ಲಾಕ್ ಆದ ಬಳಿಕ ರಾಜ್ಯಕ್ಕೆ ಫೆಬ್ರವರಿ ಅಂತ್ಯದ ವರೆಗೆ ಸುಮಾರು 10-12 ಲಕ್ಷ ಕಾರ್ಮಿಕರು ವಾಪಸಾಗಿದ್ದಾರೆ.
ಮತ್ತೆ ಗುಳೇ ಹೊರಡುವ ಭೀತಿ!