ಬೆಂಗಳೂರು:ಕೋವಿಡ್-19 ಇಡೀ ಪ್ರಪಂಚವನ್ನೇ ಭೀತಿಗೆ ದೂಡಿದ ಮಾರಣಾಂತಿಕ ಸೋಂಕು. ಸಾಮಾನ್ಯ ಜನರು ಮನೆಯಿಂದ ಹೊರಬರದಂತೆ ಮಾಡಿದ ಮಾಡಿದ ಈ ಸೋಂಕು ಅಂಧರನ್ನು ಕಾಡಿದ್ದು ಅಷ್ಟಿಷ್ಟಲ್ಲ.
ಮನೆಯಿಂದ ಹೊರಬಂದರೆ ಸಾಕು, ರಸ್ತೆ ದಾಟಲು, ಬಸ್ ಹತ್ತಲು, ಹೊರಗಡೆ ಓಡಾಡಲು ಮತ್ತೊಬ್ಬರ ಸಹಾಯವನ್ನೇ ಅವಲಂಬಿತರಾಗಿರುವ ಅಂಧರ ಜೀವನ ಮತ್ತಷ್ಟು ಕತ್ತಲೆಗೆ ದೂಡಲ್ಪಟ್ಟಿದೆ. ತಮ್ಮ ಕೌಶಲ್ಯದಿಂದಲೋ, ಕಲಿತ ವಿದ್ಯೆಯಿಂದಲೋ ಯಾವುದೋ ಕೆಲಸದಲ್ಲಿ ನೌಕರರಾಗಿದ್ದುಕೊಂಡು ಎಲ್ಲರಂತೆ ಬದುಕುತ್ತಿದ್ದ ಅಂಧರಿಗೆ ಮನೆಯಲ್ಲೇ ಲಾಕ್ಡೌನ್ ಮಾನಸಿಕವಾಗಿ ಬಹಳ ಪರಿಣಾಮ ಬೀರಿದೆ.
ವಿಶೇಷಚೇತನ ಉದ್ಯೋಗಿಗಳ ಸಂಕಷ್ಟವನ್ನು ಕೇಳಿ.. ಸಾಮಾನ್ಯವಾಗಿ ಅಂಧರು ಊಟ-ತಿಂಡಿಗಾಗಿ ಹೋಟೆಲ್ಗಳನ್ನು ಅವಲಂಬಿಸಿದ್ದು, ಕೆಲವೊಮ್ಮೆ ಹಸಿವಿನಿಂದ ಇರಬೇಕಾದ ಅನಿವಾರ್ಯತೆಯೂ ಕೂಡಾ ಅವರಿಗಿರುತ್ತದೆ. ಮನೆಯಿಂದ ಹೊರಗಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ನಿಯಮವಿದ್ರೂ, ವಿಶೇಷ ಚೇತನರಿಗೆ ಅದು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ವಸ್ತುಗಳನ್ನೂ ಸ್ಪರ್ಶ ಜ್ಞಾನದಿಂದಲೇ ತಿಳಿಯುವುದರಿಂದ ಕೊರೊನಾ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೂ ಸವಾಲಾಗಿದೆ.
ಈಟಿವಿ ಭಾರತದ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಮಹಿಳಾ ಅಧ್ಯಕ್ಷೆ ನಾಗಮಣಿ, ಸರ್ಕಾರಿ ಅಂಧ ನೌಕರರ ಸಂಘದಲ್ಲಿ 600 ಮಂದಿ ಇದ್ದಾರೆ. ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳು ಕೆಲಸ ಆರಂಭಿಸಿರುವುದರಿಂದ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಇದೆ. ಆದರೆ ಓಡಾಟಕ್ಕೆ ವಾಹನಗಳಿಲ್ಲ, ಹೊರಗಡೆ ಜನರ ಸಹಾಯವೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಅಂಧ ನೌಕರರು ಸ್ವತಂತ್ರವಾಗಿ ಕೆಲಸಕ್ಕೆ ಹೋಗಿ ಬರಲು ಆಗುತ್ತಿಲ್ಲ. ಬೇರೆಯವರ ಸಹಾಯ ಪಡೆದ್ರೂ ಅವರಿಗೆ ಕೊರೊನಾ ಇದೆಯೋ ಇಲ್ವೋ ಎಂಬ ಬಗ್ಗೆಯೂ ತಿಳಿದಿರುವುದಿಲ್ಲ. ಆದರೂ ಕೂಡಾ ಕೆಲ ನೌಕರರು ತಮ್ಮ ಸ್ವಂತ ವಾಹನ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಕೆಲವೆಡೆ ರಜೆಯಲ್ಲಿ ಹಾಕಿಕೊಂಡಿದ್ದಾರೆ. ಕೊರೊನಾ ಹರಡುವ ಬಗ್ಗೆ ಗೊತ್ತಿದ್ದರೂ ಕೂಡಾ ನಾವು ಅಂಗವಿಕಲತೆಯನ್ನು ಮೀರಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಸರ್ಕಾರಿ ಕೆಲಸ ಮಾತ್ರ ಅಲ್ಲದೆ ಗಾರ್ಮೆಂಟ್ಸ್ ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಎನ್ಎಂಕೆಆರ್ವಿ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ. ಸಂಗೀತ ಅವರು ಮಾತನಾಡಿ, ಕೆಲವು ಸಂಸ್ಥೆಗಳು ಅಂಧ ಮಕ್ಕಳನ್ನು ಓದಿಸುತ್ತಿದ್ದು, ಅವರು ಉತ್ತಮ ಪೋಷಣೆಯಲ್ಲಿ ಇದ್ದಾರೆ. ಆದರೆ ಮನೆಗಳಲ್ಲಿ ಇರುವ ಅನೇಕರು ಅವರ ಸಂಗಾತಿ ಕೂಡಾ ವಿಶೇಷ ಚೇತನರೇ ಆಗಿರುವುದರಿಂದ ದಿನನಿತ್ಯದ ಜೀವನ ನಡೆಸುವುದು ಲಾಕ್ಡೌನ್ ಸಂದರ್ಭದಲ್ಲಿ ಕಷ್ಟ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.