ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರದಿಂದಾಗಿ ಸರ್ಕಾರ ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಇದರ ಪರಿಣಾಮ ರೈತರ ಮೇಲೆ ಬಿದ್ದಿದೆ. ಬೆಳೆದ ತರಕಾರಿ, ಹೂವು - ಹಣ್ಣು ಮಾರಾಟ ಮಾಡಲಾಗದ ಸ್ಥಿತಿಗೆ ಬಂದಿರುವ ರೈತರು, ಬೆಳೆದ ಬೆಳೆಗಳನ್ನು ಬೀದಿಗೆ ಚೆಲ್ಲುತ್ತಿರುವುದು, ಹೊಲದಲ್ಲೇ ಬಿಡುವುದು ಸಾಮಾನ್ಯವಾಗಿದೆ. ಒಟ್ಟಾರೆ, ಕೊರೊನಾ ಅಬ್ಬರದಿಂದಾಗಿ ರೈತರ ಬದುಕು ಬೀದಿಗೆ ಬಿದ್ದಿದೆ.
ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೇ ಕಷ್ಟ ಪಟ್ಟು ಬೆಳೆದ ತರಕಾರಿ, ಹೂ-ಹಣ್ಣುಗಳಿಗೆ ಬೆಲೆ ಇಲ್ಲದೆ ಜಮೀನುಗಳಲ್ಲೇ ನಾಶವಾಗುತ್ತಿದ್ದರೆ, ನಗರದಲ್ಲಿ ಮಾತ್ರ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಸಿಗದ ಬೆಲೆ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುತ್ತಿದೆ. ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂದು ಕೆಲವು ರೈತರು ತರಕಾರಿಗಳನ್ನು ರಸ್ತೆ ಬದಿ ಸುರಿಯುತ್ತಿದ್ದಾರೆ. ಕೆಲ ರೈತರು ಬೆಳೆ ಕಟಾವು ಮಾಡದೆ ಹಾಗೇ ಜಮೀನಿನಲ್ಲಿ ಬಿಟ್ಟಿದ್ದು, ಇನ್ನೂ ಕೆಲವರು ಉಚಿತವಾಗಿ ಹಂಚುತ್ತಿದ್ದಾರೆ.
ಓದಿ: ಯುವತಿ ವಿಚಾರದಲ್ಲಿ ಗಲಾಟೆ ; ಹಲ್ಲೆಗೊಳಗಾಗಿ ಯುವಕ ಸಾವು : ಹಾಸನದಲ್ಲಿ ಪ್ರಕರಣ ದಾಖಲು..
ಲಾಕ್ಡೌನ್ ಇರುವುದರಿಂದ ಎಷ್ಟೇ ಬೆಲೆ ಹೇಳಿದರೂ ಗ್ರಾಹಕರು ಖರೀದಿಸುತ್ತಾರೆ. ಏಕೆಂದರೆ, ನಾಲ್ಕು ಗಂಟೆ ಸಮಯದಲ್ಲಿ ವ್ಯಾಪಾರ ಮಾಡಿಕೊಳ್ಳಬೇಕೆಂದು ಚಿಲ್ಲರೆ ವ್ಯಾಪಾರಿಗಳು ಅಧಿಕ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ವಾಹನ ಸೌಲಭ್ಯವಿಲ್ಲ, ತಂದರೂ ಬೆಲೆ ಇಲ್ಲ ಖರ್ಚು ಸಹ ಬರುವುದಿಲ್ಲ. ಹಾಗಾಗಿ ರೈತರು ಜಮೀನುಗಳಲ್ಲೆ ಫಸಲನ್ನು ಬಿಡುತ್ತಿದ್ದಾರೆ.
ಅದೂ ಅಲ್ಲದೇ ಬೆಳಗ್ಗೆ ಅಷ್ಟೆ ಮಾರುಕಟ್ಟೆ ಇರುವುದು, ಸಂಜೆ ಮಾರುಕಟ್ಟೆಗಳು ಇಲ್ಲದೆ ಇರುವುದರಿಂದ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ಇದರ ಲಾಭ ಮಾತ್ರ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೇಬು ತುಂಬುತ್ತಿದೆ. ರೈತರ ಸಂಕಷ್ಟ ಅರಿತ ಕೆಲ ಸಿನಿಮಾ ನಟರು, ಜನಪ್ರತಿನಿಧಿಗಳು, ಧಾನಿಗಳು ರೈತರಿಂದ ಕೆಲ ಫಸಲನ್ನು ಖರೀದಿಸಿ ಸಂಕಷ್ಟಕ್ಕೆ ಸಿಲುಕಿದವರಿಗೆ ಹಂಚುತ್ತಿದ್ದಾರೆ.
ಹೊರ ರಾಜ್ಯಗಳಿಗೆ ತರಕಾರಿ ಹಾಗೂ ಹೂ - ಹಣ್ಣು ಸರಬರಾಜು ಇಲ್ಲದೆ ಬೆಲೆ ಕುಸಿತವಾಗಿದೆ. ಅಲ್ಲದೆ ಹೋಲ್ ಸೆಲ್ ಕೊಳ್ಳುವವರಿಲ್ಲ, ಚಿಲ್ಲರೆಯವರು ಮಾತ್ರ ಖರೀದಿಸುತ್ತಾರೆ ಹಾಗಾಗಿ ಚಿಲ್ಲರೆ ತರಕಾರಿ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ತರಕಾರಿ ಖರೀದಿಸುವವರಿಗಿಂತ ಮಾರುವವರೇ ಹೆಚ್ಚಾಗಿದ್ದಾರೆ. ಹೋಬಳಿ, ಜಿಲ್ಲಾ, ತಾಲೂಕು ಮಟ್ಟದಲ್ಲಿ ತರಕಾರಿ ಮಾರುಕಟ್ಟೆಗಳನ್ನು ತೆರೆದು ರೈತರಿಂದ ನೆರವಾಗಿ ಖರಿದಿಸಿದರೆ ಸ್ವಲ್ಪ ಅನುಕೂಲ ವಾಗಲಿದೆ. ಇಲ್ಲವಾದರೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕುವಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೆಕಿದೆ ಎನ್ನುತ್ತಾರೆ ರೈತರು.
ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಬಂದಾಗ, ಲಾಕ್ಡೌನ್ ಸಮಯದಲ್ಲಿ ಭಾರಿ ನಷ್ಟವಾಗಿ ರಾಜ್ಯದ ತರಕಾರಿ ಬೆಳೆಗಾರರು, ಹಣ್ಣು - ಹಂಪಲು, ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೊನಾ ಎರಡನೇ ತಾಂಡವವಾಡುತ್ತಿದ್ದು, ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದುವೆ ಸಮಾರಂಭಗಳಲ್ಲಿ ಸೀಮಿತ ಪ್ರಮಾಣದಲ್ಲಿ ಅತಿಥಿಗಳನ್ನು ಸೇರಿಸುವುದು, ಸಾಮಾಜಿಕವಾಗಿ ಜನರು ಗುಂಪು ಸೇರದಂತೆ ತಡೆಗಟ್ಟಿರುವುದು, ಜಾತ್ರೆಗಳು, ಹಬ್ಬ-ಹರಿದಿನಗಳನ್ನು ಸಾರ್ವಜನಿಕವಾಗಿ ಆಚರಿಸಲು ಕತ್ತರಿ ಹಾಕಿರುವುದು ರೈತರ ಬೆಳೆಗಳ ಮಾರಾಟಕ್ಕೆ ಕುತ್ತು ತಂದಿದೆ. ಹಣ್ಣು-ತರಕಾರಿಗಳನ್ನು ಮಾರುಕಟ್ಟೆಗೆ ಒಯ್ಯಲು ಪಕ್ಕದ ರಾಜ್ಯಗಳಿಗೆ ಸಾಗಾಟ ಮಾಡಲು ವಾಹನಗಳ ಓಡಾಟ ಕೂಡ ಕಡಿಮೆಯಾಗಿರುವುದು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯ ಅಭಾವವನ್ನು ಸೃಷ್ಟಿಸಿದೆ.