ಬೆಂಗಳೂರು: ಕೊರೊನಾ ವೈರಸ್ ನಿಯ.ತ್ರಣಕ್ಕೆ ಲಾಕ್‌ಡೌನ್ ಪರಿಹಾರ ಅಲ್ಲ. ಲಾಕ್‌ಡೌನ್ ಮಾಡುವುದೂ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಕೆಲ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಲಾಕ್‌ಡೌನ್ ಪರಿಹಾರ ಅಲ್ಲ. ಉಲ್ಬಣ ಆದ ತಕ್ಷಣಕ್ಕೆ ಲಾಕ್‌ಡೌನ್ ಹಾಕುವ ಯೋಚನೆ ಇಲ್ಲ. ಹಾಗೇ ಮಾಡುವುದೂ ಇಲ್ಲ. ಸಿಎಂ ಕೂಡ ಲಾಕ್‌ಡೌನ್ ಮಾಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ನೀಡುವ ಸೂಚನೆಯನ್ನು ಅನುಸರಿಸುವ ಕೆಲಸ ಮಾಡುತ್ತೇವೆ ಎಂದರು.
ವೀಕೆಂಡ್ ಕರ್ಫ್ಯೂನಲ್ಲಿ ಬೀದಿ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಕಣ್ಣೀರು ಹಾಕಿದ್ದಾರೆ. ಲಾಕ್ಡೌನ್ನಿಂದ ಬಡವರಿಗೆ, ಬೀದಿ ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಇರಾದೆ ಏನೂ ಇಲ್ಲ. ಕಂಟ್ರೋಲ್ ತಪ್ಪುವ ಸ್ಥಿತಿ ಬಂದಾಗ ಲಾಕ್ ಡೌನ್ ಮಾಡೋದು ಅದೊಂದು ವಿಧಾನ. ಆದಷ್ಟು ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
(ಇದನ್ನೂ ಓದಿ: ವಿವೋ ಐಪಿಎಲ್ ಅಲ್ಲ, ಮುಂದಿನ ವರ್ಷ ಟಾಟಾ ಐಪಿಎಲ್)
ಪಾದಯಾತ್ರೆಯೇ ಕಾಂಗ್ರೆಸ್ಗೆ ಮಾರಕ:ಕಾಂಗ್ರೆಸ್ಗೆ ಪಾದಯಾತ್ರೆಯಿಂದ ಗಳಿಕೆಗಿಂತ ಕಳೆದುಕೊಳ್ಳೋದು ಜಾಸ್ತಿ. ಪಾದಯಾತ್ರೆಯೇ ಕಾಂಗ್ರೆಸ್ಗೆ ಮಾರಕವಾಗಲಿದೆ. ಕಾರ್ಯಸಾಧ್ಯ ವರದಿ ತೆಗೆದುಕೊಳ್ಳೋದಕ್ಕೆ ಕಾಂಗ್ರೆಸ್ ಐದು ವರ್ಷ ಮಾಡಿದರು. ಐದು ವರ್ಷ ಸಿಂಹಾಸನದ ಮೇಲೆ ಕುಳಿತಾಗ ನಮ್ಮ ನೀರು ನಮ್ಮ ಹಕ್ಕು ಅನ್ನೋದು ಅವರಿಗೆ ನೆನಪೇ ಆಗಲಿಲ್ಲ. ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಹೆಚ್.ಎಂ.ರೇವಣ್ಣಗೆ ಪಾದಯಾತ್ರೆಗೆ ಕರೆದುಕೊಂಡು ಹೋಗಿ ಕೋವಿಡ್ ಅಂಟಿಸಿ ಕಳಿಸಿದ್ದಾರೆ. ಇದನ್ನು ನಾವು ಮಾಡಿದ್ದಾ?. ಜನರಿಗೆ ಸುಳ್ಳು ಹೇಳ್ತಿದ್ದಾರೆ. ಬೆಂಗಳೂರು ಜನರ ರಕ್ಷಣೆ ದೃಷ್ಟಿಯಿಂದ ಒಂದಷ್ಟು ಚರ್ಚೆ ಆಗ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾಡಿ ಲಾಂಗ್ವೇಜ್ ಬಗ್ಗೆ ನಾನು ಏನೂ ಹೇಳಲ್ಲ. ಅವರ ಬಾಡಿ ಲಾಂಗ್ವೇಜ್ ಬಗ್ಗೆ ಜನರಿಗೇ ಗೊತ್ತಿದೆ. ಬೆಂಗಳೂರು ಜನರ ರಕ್ಷಣೆ ಮಾಡುವ ದೃಷ್ಟಿಯಿಂದ ಸಮಾಲೋಚನೆ ಆಗುತ್ತಿದೆ. ಕಾಂಗ್ರೆಸ್ ಕೂಡ ಯೋಚನೆ ಮಾಡಬೇಕು ಎಂದು ಮನವಿ ಮಾಡಿದರು.
ರೇಣುಕಾಚಾರ್ಯ ನಡೆ ಸಮರ್ಥನೀಯವಲ್ಲ:ಶಾಸಕ ಎಂ ಪಿ ರೇಣುಕಾಚಾರ್ಯ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದನ್ನು ಗಮನಿಸಿದ್ದೇನೆ. ಆ ಕಾರ್ಯಕ್ರಮದ ಬಗ್ಗೆ ಎಫ್ಐಆರ್ ಆಗಿದೆ, ಉಳಿದ ವಿಚಾರಣೆ ನಡೆಯುತ್ತಿದೆ. ಆದರೆ ಅವರು ಅದರಲ್ಲಿ ಪಾಲ್ಗೊಂಡಿರುವುದು ಸಮರ್ಥನೀಯವಲ್ಲ ಎಂದು ತಿಳಿಸಿದರು.
(ಇದನ್ನೂ ಓದಿ: ನಾವು ಗಂಡಸರು, ಗಂಡಸ್ತನವನ್ನು ಕೆಲಸದಲ್ಲಿ ತೋರುವೆವು: ಸಚಿವ ಅಶ್ವತ್ಥ್ ನಾರಾಯಣ್)
ಕಾನೂನು ಎಲ್ಲರಿಗೂ ಕೂಡ ಒಂದೇ. ರೇಣುಕಾಚಾರ್ಯ ವಿರುದ್ಧ ಕೂಡ ಎಫ್ಐಆರ್ ಆಗಲಿದೆ. ಪೊಲೀಸ್ ಅಧಿಕಾರಿಗಳಿಂದ ನಾನು ವಿವರಣೆ ಕೇಳ್ತೇನೆ. ಬೆಳಗ್ಗೆ ರೇಣುಕಾಚಾರ್ಯ ಬಂದಿದ್ರು, ಆಗ ಕಾರ್ಯಕ್ರಮಕ್ಕೆ ಏಕೆ ಹೋಗಿದ್ದು ಅಂತ ಅವರಿಗೆ ಪ್ರಶ್ನೆ ಮಾಡಿದ್ದೇನೆ. ಜಿಲ್ಲಾಡಳಿತಗಳಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದ್ರು.