ಬೆಂಗಳೂರು: ಕೊರೊನಾ ಮತ್ತು ಲಾಕ್ಡೌನ್ ಎಲ್ಲಾ ವರ್ಗದ ಜನರನ್ನೂ ಸಂಕಷ್ಟಕ್ಕೆ ದೂಡಿದೆ. ಇದರಿಂದ ಬ್ರಾಹ್ಮಣ ಸಮುದಾಯವೂ ಹೊರತಾಗಿಲ್ಲ. ಸಾಮಾನ್ಯ ದಿನಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಪುರೋಹಿತ ವರ್ಗ, ಸಭೆ, ಮದುವೆ, ಸಮಾರಂಭಗಳಿಗೆ ಅಡುಗೆ ಮಾಡುವ ಅಡುಗೆ ಭಟ್ಟರು, ಸಹಾಯಕರ ಸ್ಥಿತಿಯೂ ಚಿಂತಾಜನಕವಾಗಿದೆ.
ದಿನಸಿ, ಪಡಿತರ, ಮನೆ ಬಾಡಿಗೆ ನೀಡಲು ಹಣವಿಲ್ಲದೆ ನಗರದ ಎಷ್ಟೋ ಬ್ರಾಹ್ಮಣರು ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವೂ ಇವರ ನೆರವಿಗೆ ಬಂದಿಲ್ಲ. ನಿನ್ನೆ ಸಿಎಂ ವಿವಿಧ ಕೆಲಸ ಮಾಡುವ ಜನರಿಗೆ ಆರ್ಥಿಕ ಸಹಾಯ ಮಾಡಿದರೂ ಕೂಡಾ ಪುರೋಹಿತವರ್ಗವನ್ನು ಮರೆತಿದ್ದಾರೆ. ಬಿಪಿಎಲ್ ರೇಷನ್ ಕಾರ್ಡ್ ಕೂಡಾ ಇಲ್ಲ. ಈ ರೀತಿ ಕಡೆಗಣನೆ ಯಾಕೆ ಎಂದು ಹಲವು ಬ್ರಾಹ್ಮಣ ಸಂಘಟನೆಗಳು ಪ್ರಶ್ನಿಸಿವೆ.
ಬರೋಬ್ಬರಿ 43 ದಿನಗಳ ಬಳಿಕ ಮೂರನೇ ಹಂತದ ಲಾಕ್ಡೌನ್ನಲ್ಲಿಯೂ ದೇವಸ್ಥಾನಗಳ ಬಾಗಿಲು ತೆರೆಯಲು ಅನುಮತಿ ಸಿಕ್ಕಿಲ್ಲ. ಸಭೆ, ಸಮಾರಂಭಗಳೂ ನಡೆಯದಿರುವ ಹಿನ್ನಲೆ ಪುರೋಹಿತರು, ಅಡುಗೆ ಕೆಲಸ ಮಾಡುವವರ ಜೀವನ ಸಹಜ ಸ್ಥಿತಿಗೆ ಬರಲು ಬಹಳ ತಿಂಗಳುಗಳೇ ಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ, ಯಜ್ಞಾವಲ್ಕ್ಯ ಟ್ರಸ್ಟ್ ಮತ್ತು ಬ್ರಾಹ್ಮಣ ಸಂಘಗಳ ವತಿಯಿಂದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಚಾಮರಾಜನಗರದ ಸಂಘದ ಕಚೇರಿಗೆ ಬಂದು ಸಂಕಷ್ಟಕ್ಕೊಳಗಾಗಿರುವವರ ಅಹವಾಲುಗಳನ್ನು ಸ್ವೀಕರಿಸಿದರು.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರರನ್ನು ಭೇಟಿಯಾಗಿ ಸಮಸ್ಯೆಯ ಮನದಟ್ಟು ಮಾಡಲಾಗಿದೆ. ಪುರೋಹಿತರು, ಮಧ್ಯಮ ವರ್ಗದ ಬ್ರಾಹ್ಮಣರು ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಖಜಾಂಚಿ ಡಾ. ಕೆ.ವಿ. ರಾಮಚಂದ್ರ, ಮುಜರಾಯಿ ಇಲಾಖೆಯ ಅರ್ಚಕರಿಗೆ ಸರ್ಕಾರದ ವೇತನ ಬರುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಮಧ್ಯಮ ವರ್ಗದ ಬ್ರಾಹ್ಮಣರಿಗೆ ನಗರದಲ್ಲಿ ತುಂಬಾ ಸಮಸ್ಯೆಯಾಗಿದೆ. ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.