ಬೆಂಗಳೂರು:ದೇಗುಲಗಳ ಬಾಗಿಲನ್ನು ತೆರೆಯದೇ ಬರೋಬ್ಬರಿ ಒಂದೂವರೆ ತಿಂಗಳಾಯ್ತು. ಕೊರೊನಾ ವೈರಸ್ ಭೀತಿಯಿಂದ ಮೊದಲು ನಗರದ ಹಲವು ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ, ಜನರು ಬರುವುದನ್ನ ಸಂಪೂರ್ಣ ನಿಷೇಧಿಸಲಾಗಿತ್ತು. ಲಾಕ್ಡೌನ್ ಸಡಿಲಿಕೆ ಮಾಡಿದರೂ ದೇವಸ್ಥಾನಗಳು ಬಂದ್ ಆಗಿವೆ.
ಲಾಕ್ಡೌನ್ ಎಫೆಕ್ಟ್ನಿಂದಾಗಿ ದೇಗುಲಗಳ ಆದಾಯಕ್ಕೂ ಹೊಡೆತ ಬಿದ್ದಿದೆ. ಮಾರ್ಚ್ ಮೊದಲೆರಡು ವಾರಗಳು ಬಾಗಿಲು ತೆರೆದಿದ್ದು ಬಿಟ್ಟರೆ ಏಪ್ರಿಲ್, ಮೇ ತಿಂಗಳ ಈ ದಿನದವರೆಗೂ ಬಾಗಿಲು ಮುಚ್ಚಿದೆ. ಇದರಿಂದಾಗಿ ದೇಗುಲಗಳಿಂದ ಬರುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದಿದೆ.
ಅಂದಹಾಗೇ, ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಎ ಪ್ರವರ್ಗದ 144 ದೇವಾಲಯಗಳ ಹುಂಡಿ ತುಂಬಿಲ್ಲ. ತಿಂಗಳಿಗೆ ಕೋಟಿ ಕೋಟಿ ಆದಾಯ ತರುತ್ತಿದ್ದ ಶ್ರೀಮಂತ ದೇಗುಲಗಳ ಆದಾಯದಲ್ಲಿ ಇಳಿಮುಖವಾಗಿದೆ. ಈ ಮೊದಲು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ರಜೆ ಇರುವ ಕಾರಣದಿಂದ ಲಕ್ಷಾಂತರ ಜನರು ರಾಜ್ಯದ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಈಗ ದೇವಾಲಯಗಳು ಬಂದ್ ಆಗಿದ್ದು, ಆದಾಯಕ್ಕೆ ಹೊಡೆತ ಬಿದ್ದಿದೆ. ಮುಜರಾಯಿ ಇಲಾಖೆಯು ಆದಾಯ ಗಳಿಸುವ ದೇವಾಲಯಗಳನ್ನ ಮೂರು ವರ್ಗದಲ್ಲಿ ವಿಂಗಡಿಸಿದೆ. ಒಂದು ವರ್ಷಕ್ಕೆ 25 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸಿದರೆ, ಎ ವರ್ಗದ ದೇವಾಲಯವೆಂದು, 5 ಲಕ್ಷದಿಂದ 25ಲಕ್ಷದವರೆಗೆ ಆದಾಯವಿದ್ದರೆ ಬಿ ವರ್ಗದ ದೇವಾಲಯವೆಂದು ಹಾಗೂ 5 ಲಕ್ಷದ ಕೆಳಗೆ ಇದ್ದರೆ ಅದನ್ನ ಸಿ ವರ್ಗದ ದೇವಾಲಯಗಳೆಂದು ವಿಂಗಡಿಸಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿನ ಪ್ರಮುಖ ದೇವಸ್ಥಾನಗಳ ಆದಾಯ ಇಂತಿದೆ
- ಮಾರ್ಚ್ - 45,14,04,632 ರೂಪಾಯಿ( 45.14ಕೋಟಿ)
- ಏಪ್ರಿಲ್- 31,45,47,772 ರೂಪಾಯಿ( 31.45ಕೋಟಿ)
- ಮೇ- 36,98,81,976 ರೂಪಾಯಿ( 36.98ಕೋಟಿ)
ಕಳೆದ ವರ್ಷ ರಾಜ್ಯದ ಪ್ರಮುಖ ದೇವಾಲಯಗಳ ಆದಾಯ ಬರೋಬ್ಬರಿ 1,135,834,384( 113ಕೋಟಿ) ರೂ. ಆಗಿತ್ತು. ಆದರೆ 2020ನೇ ಸಾಲಿನ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬಹುಪಾಲು ಆದಾಯವನ್ನು ಕೊರೊನಾ ನುಂಗಿ ಹಾಕಿದೆ. ಇದೇ ರೀತಿ ಲಾಕ್ಡೌನ್ ಮುಂದುವರೆದರೆ ಬಹುಶಃ ಮೂರು ತಿಂಗಳ ಆದಾಯಕ್ಕೆ ಬ್ರೇಕ್ ಬೀಳಲಿದೆ.