ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಒಮ್ಮತದ ತೀರ್ಮಾನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬುಧವಾರದಂದು ವಿಧಾನಸೌಧದಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಸಭೆ ನಡೆದಿದ್ದು, ನಂತರ ಸಿಎಂ ಬೊಮ್ಮಾಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದದರು.
ಎಲ್ಲ ಆಯಾಮಗಳಲ್ಲಿ ವಿಚಾರ ಮಾಡಿ ಹಿಂದುಳಿದ ವರ್ಗಗಳಲ್ಲಿ ರಾಜಕೀಯವಾಗಿ ಹಿಂದುಳಿದಿರುವುದನ್ನು ಗುರುತಿಸಬೇಕು. ಅದಕ್ಕಾಗಿ ಸಮಿತಿ ರಚಿಸಬೇಕು. ಒಟ್ಟಾರೆ ಮೀಸಲಾತಿ ಶೇ.50 ಅನ್ನು ಮೀರಬಾರದು ಎನ್ನುವ ಸರ್ವೋಚ್ಛ ನ್ಯಾಯಾಲಯದ ಷರತ್ತುಗಳನ್ವಯ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ತಿಂಗಳ ಅಂತ್ಯದೊಳಗೆ ಮುಂದಿನ ಸಭೆ ನಿಗದಿಪಡಿಸಲಾಗುವುದು. ಆ ಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಹಾಜರಾತಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಇತ್ತೀಚಿನ ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ರೀತಿ ಚುನಾವಣೆ ನಡೆಯಬೇಕು ಎಂಬ ವಿಚಾರದಲ್ಲಿ ಸುದೀರ್ಘ ಚರ್ಚೆಯಾಗಿದೆ. ಅಡ್ವೊಕೇಟ್ ಜನರಲ್ ಅವರು ಕಾನೂನಿನ ವಸ್ತುಸ್ಥಿತಿಯ ವಿವರಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಈ ಕುರಿತು ಆಯೋಗ ರಚಿಸಿ ವರದಿ ಪಡೆದು ಚುನಾವಣೆಗೆ ಹೋಗಬೇಕೇ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕಬೇಕೆ ಎನ್ನುವ ಆಯ್ಕೆ ನಮ್ಮ ಮುಂದಿದೆ. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡದೇ ಚುನಾವಣೆಗೆ ಹೋಗಲು ಸಾಧ್ಯವಿಲ್ಲ ಎಂದರು.
ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ: ಸಭೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವ ಬಗ್ಗೆಯೂ ಚರ್ಚೆಯಾಗಿದೆ. ಶೇ.7.5ಕ್ಕೆ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಸಮುದಾಯದವರ ಬೇಡಿಕೆಯಿದೆ. ಅವರ ಜನಸಂಖ್ಯೆಯೂ ಹೆಚ್ಚಾಗಿದೆ. ಹಿಂದಿನ ಸರ್ಕಾರ ಈ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚಿಸಿತ್ತು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಮಿತಿ ವರದಿ ಸಲ್ಲಿಸಿದೆ. ವರದಿಯಲ್ಲಿ ಎಸ್.ಸಿ ಮತ್ತು ಎಸ್.ಟಿ ಗೆ ಮೀಸಲಾತಿ ಹೆಚ್ಚಿಸಬೇಕೆಂದು ಶಿಫಾರಸು ಮಾಡಲಾಗಿದೆ. ಅದರಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.