ಬೆಂಗಳೂರು: ಸಾಂಕ್ರಾಮಿಕ ರೋಗ ಕೋವಿಡ್ನಿಂದಾಗಿ ರಾಜ್ಯಾದ್ಯಂತ ಶಾಲೆಗಳು ಬಾಗಿಲು ಮುಚ್ಚಿದ್ದವು. ನಿಧಾನವಾಗಿ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಹಂತ-ಹಂತವಾಗಿ ತರಗತಿಗಳನ್ನು ಆರಂಭಿಸುತ್ತಿದೆ. ಇಂದಿನಿಂದ ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಕೇಂದ್ರಗಳು ಬಾಗಿಲು ತೆರೆಯಲಿವೆ.
ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವ ಕುರಿತು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಇಲಾಖೆ ಹಾಗು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಯಿತು.
ಇದರ ಪರಿಣಾಮ, ಮೊದಲ ಭಾಗವಾಗಿ ಆ.23 ರಿಂದ ರಾಜ್ಯದಲ್ಲಿ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕು, ವಲಯಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ಹಾಗು ಪಿಯುಸಿ ತರಗತಿಯನ್ನು ಆರಂಭಿಸಲಾಯಿತು. ಇದು ಯಶಸ್ವಿಯಾಗುತ್ತಿದ್ದಂತೆ 2ನೇ ಹಂತವಾಗಿ ಸೆ.6 ರಂದು 6 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಿ, ನಂತರದ ದಿನಗಳಲ್ಲಿ ಅಂದರೆ ಅ. 4ರಂದು 6 ರಿಂದ 10ನೇ ತರಗತಿಗಳನ್ನು ದೈನಂದಿನ ಪೂರ್ಣ ಅವಧಿಗೆ ಪೂರ್ಣ ಪ್ರಮಾಣದಲ್ಲಿ ಶುರು ಮಾಡಲಾಯಿತು.
ಇದಕ್ಕೆಲ್ಲ ಉತ್ತಮ ಪ್ರತಿಕ್ರಿಯೆ ಬಂದ ಬಳಿಕ 1-5ನೇ ತರಗತಿಗಳನ್ನು ಅ.25ರಿಂದ ಅರ್ಧ ದಿನ ಭೌತಿಕವಾಗಿ ಪ್ರಾರಂಭಿಸಿ, ನ.2 ರಿಂದ 1-5ನೇ ತರಗತಿಗಳನ್ನು ಪೂರ್ಣ ಅವಧಿಗೆ ಭೌತಿಕವಾಗಿ ಆರಂಭಿಸಲಾಗಿದೆ. ಇದೀಗ ಮುಂದುವರೆದಂತೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ.1ರೊಳಗೆ ಇದ್ದು, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿನ ಹಾಗು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿನ ಎಲ್‌ಕೆಜಿ ಮತ್ತು ಯುಜಿಕೆ ತರಗತಿಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ.
- ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ:
ಇಂದಿನಿಂದ ಎಲ್‌ಕೆಜಿ, ಯುಕೆಜಿ ಹಾಗು ಅಂಗನವಾಡಿ ಆರಂಭವಾಗುತ್ತಿದ್ದು, ಇದಕ್ಕೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಲಾಗಿದೆ. ಈ ಮಕ್ಕಳಿಗೆ ಅರ್ಧ ದಿನ ಮಾತ್ರ ತರಗತಿ ನಡೆಯಲಿದ್ದು, ಕೋವಿಡ್ ನಿಯಮಗಳನ್ನ ಚಾಚುತಪ್ಪದೇ ಪಾಲಿಸಬೇಕಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತರಗತಿಗಳು ನಡೆಯಲಿದ್ದು, 9-30 ರಿಂದ 3-30ರ ವರೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಕೊಠಡಿಯನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಸೋಂಕು ನಿವಾರಕ ದ್ರಾವಣಗಳನ್ನು ಮಕ್ಕಳ ಕೈಗೆ ಸಿಗದಂತೆ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಮಕ್ಕಳಿಗೆ ತಿಳಿಯದೆ ಅನಿರೀಕ್ಷಿತವಾಗಿ ಸೇವಿಸಿದಲ್ಲಿ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
- ಶಾಲೆಗೆ ಬರಲು ಪಾಲಿಸಬೇಕಾದ ನಿಯಮಗಳಿವು..
- ಶಿಕ್ಷಕರಲ್ಲಿ ಹಾಗು ವಿದ್ಯಾರ್ಥಿಗಳಲ್ಲಿ ಕೋವಿಡ್- 19ರ ಸೋಂಕಿನ ಯಾವುದೇ ಲಕ್ಷಣ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
- ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಲ್ಲಿ ಶಾಲೆಯನ್ನು ಮುಚ್ಚಿ ಸ್ಯಾನಿಟೈಸ್ ಮಾಡಬೇಕು. ಸ್ಥಳೀಯ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಂತೆ ಅವರು ತಿಳಿಸಿದ ದಿನಗಳ ನಂತರ ಶಾಲೆಯನ್ನು ಪೂರ್ಣವಾಗಿ ಪಾರಂಭಿಸಬೇಕು.
- ಶಾಲೆಗೆ ಹಾಜರಾಗುವ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸುವುದು.
- ಸಂದರ್ಶಕರಿಗೆ ಯಾವುದೇ ಮೂರನೇ ವ್ಯಕ್ತಿಗಳಿಗೆ ಶಾಲಾ ಪ್ರವೇಶವನ್ನು ನಿರ್ಬಂಧಿಸಬೇಕು.
- ಸುರಕ್ಷಿತವಾದ ಆಹಾರ ಪದಾರ್ಥ ಮತ್ತು ಶುದ್ಧ ಕುಡಿಯುವ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಪದಾರ್ಥ, ವಸ್ತುಗಳು ಮಕ್ಕಳ ಬಾಯಿ, ಮೂಗು ಹಾಗು ಮುಖದ ಸಂಪರ್ಕಕ್ಕೆ ಬಾರದಂತೆ ಕ್ರಮ ವಹಿಸುವುದು.
- ಶಾಲೆಗಳಲ್ಲಿ ಹಾಜರಾಗುವ ಎಲ್‌ಕೆಜಿ ಮತ್ತು ಯುಕೆಜಿ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು.
- ಶಾಲೆಗೆ ಹಾಜರಾಗುವ ಎಲ್ಲಾ ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
- ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಹಾಗು ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
- 50 ವರ್ಷ ಮೇಲ್ಪಟ್ಟ ಶಿಕ್ಷಕರು ಹೆಚ್ಚುವರಿಯಾಗಿ ಫೇಸ್ ಶೀಲ್ಡ್ (ಮುಖ ಕವಚ) ಧರಿಸುವುದು ಕಡ್ಡಾಯ.
- ಮಕ್ಕಳಿಗೆ ಮನೆಯಿಂದಲೇ ಉಪಹಾರ, ಕುಡಿಯುವ ಶುದ್ಧ ನೀರನ್ನು ಕಳುಹಿಸುವಂತೆ ಎಲ್ಲಾ ಪೋಷಕರ ಗಮನಕ್ಕೆ ತರಬೇಕು.
- ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡುವುದು.
ಶಾಲೆಯ ಪ್ರವೇಶದ್ವಾರದಲ್ಲಿ ಕೋವಿಡ್-19 ಲಕ್ಷಣಗಳ ಕುರಿತು ತಪಾಸಣೆ ಮಾಡುವುದು. ಈ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ, ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವುದು ಮೈ ಕೈ ನೋವು, ಉಸಿರಾಟದ ತೊಂದರೆ, ರುಚಿ ಮತ್ತು ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣಗಳಿಂದ ಬಳಲುತ್ತಿದ್ದರೆ, ಅವರನ್ನು ಐಸೂಲೇಷನ್ ಕೊಠಡಿಯಲ್ಲಿ ಇರಿಸಬೇಕು. ಅವರ ಪಾಲಕರನ್ನು ಸಂಪರ್ಕಿಸಿ, ಅವರ ಮನೆಗೆ ಕಳುಹಿಸತಕ್ಕದ್ದು. ಮತ್ತು ಅವರಿಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸುವುದು.
ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ನಿಯಮಿತವಾಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಕ್ರಮವಹಿಸಬೇಕು. ಮಕ್ಕಳು ಕೆಮ್ಮುವಾಗ, ಸೀನುವಾಗ ಕರವಸ್ತ್ರದಿಂದ ಬಾಯಿ/ಮೂಗನ್ನು ಮುಚ್ಚಿಕೊಳ್ಳಲು ಆಗಾಗ ತಿಳಿಸಬೇಕು.
ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿ, 'ರಾಜ್ಯಾದ್ಯಂತ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಚಿಣ್ಣರ ಬರುವಿಕೆಗೆ ನಾವು ಕಾಯುತ್ತಿದ್ದೇವೆ. 21 ತಿಂಗಳ ಬಳಿಕ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದು, ಪುಟಾಣಿಗಳ ಸ್ವಾಗತಕ್ಕೆ ರಾಜ್ಯಾದ್ಯಂತ ಶಾಲೆಗಳು ಸಕಲ ತಯಾರಿ ಮಾಡಿಕೊಂಡಿವೆ. ಮಕ್ಕಳಿಗೆ ಭಾಷಾ ಕಲಿಕೆಗೆ ಪ್ರಾಥಮಿಕ ತರಗತಿ ಬಹಳ ಮುಖ್ಯ. ಹೀಗಾಗಿ ಕೋವಿಡ್ ನಿಯಮ ಪಾಲನೆಯೊಂದಿಗೆ ತರಗತಿ ಆರಂಭಿಸಲಿದ್ದೇವೆ' ಎಂದು ತಿಳಿಸಿದರು.