ಬೆಂಗಳೂರು: ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ಗೆ ಬರಲಿವೆ. ಶೇ.50ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ತಿಳಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೋಗಿದ್ದ ಮತಗಳಲ್ಲಿ ಅರ್ಧದಷ್ಟು ನಮಗೆ ಬರಲಿವೆ ಎಂದರು.
ಯಡಿಯೂರಪ್ಪ ಅವರನ್ನು ಬಿಜೆಪಿ ಹೇಗೆ ನಡೆಸಿಕೊಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರನ್ನ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪರದ್ದು ಮುಗಿದ ಅಧ್ಯಾಯ. ಎರಡು ಬಾರಿ ಅವರಿಗೆ ಪೂರ್ಣ ಅಧಿಕಾರ ಕೊಡಲಿಲ್ಲ. ಅವರಿಂದಲೇ ಆಪರೇಷನ್ ಕಮಲ ಮಾಡಿಸಿ ನಡೆಸಿಕೊಂಡಿರೋದು ಗೊತ್ತಿದೆ ಎಂದು ತಿಳಿಸಿದರು.
ಪ್ರಚಾರ ಸಮಿತಿ ಪದಾಧಿಕಾರಿಗಳ ಲಿಸ್ಟ್ ರೆಡಿ:ಪ್ರಚಾರ ಸಮಿತಿ ಪದಾಧಿಕಾರಿಗಳ ಲಿಸ್ಟ್ ರೆಡಿ ಆಗಿದೆ. ಎಂಟತ್ತು ದಿನದಲ್ಲಿ ಲಿಸ್ಟ್ ಅನೌನ್ಸ್ ಮಾಡ್ತಾ ಇದ್ದೇನೆ. ಆಗಸ್ಟ್ 19ರಿಂದ ಸೆಪ್ಟೆಂಬರ್ವರೆಗೆ ರಾಜ್ಯ ಪ್ರವಾಸ ಮಾಡ್ತಾ ಇದ್ದೇನೆ. ಕಾಂಗ್ರೆಸ್ ಸರ್ಕಾರದ ಸಾಧನೆ, ಬಿಜೆಪಿ ವೈಫಲ್ಯ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಸೇರಿ ಪ್ರೆಸ್ ಮೀಟ್ ಮಾಡ್ತೇವೆ. ಜಿಲ್ಲಾವಾರು ಮಠಾಧೀಶರ ಭೇಟಿ ಮಾಡ್ತೇವೆ. ಎಲ್ಲಾ ಸಮುದಾಯದ ಮಠ ಹಾಗೂ ಚರ್ಚ್, ಮಸೀದಿಗೆ ಭೇಟಿ ನೀಡ್ತೇನೆ. ಪ್ರಮಖವಾಗಿ ಪಕ್ಷ ಸಂಘಟನೆ ಮಾಡ್ತೇವೆ ಎಂದರು.