ಬೆಂಗಳೂರು :ವಿದ್ಯುತ್ ಮೀಟರ್ ಅಳವಡಿಸಿ ಅವುಗಳಿಗೆ ಆರ್.ಆರ್ ಸಂಖ್ಯೆ ನೀಡಲು ಶ್ರೀರಾಂಪುರದ ಸ್ವತಂತ್ರಪಾಳ್ಯದ ನಿವಾಸಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಲೈನ್ಮ್ಯಾನ್ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜಧಾನಿಯ ಶ್ರೀರಾಂಪುರ ಬೆಸ್ಕಾಂ ಕಚೇರಿಯ ಲೈನ್‍ಮ್ಯಾನ್ ಮಂಜುನಾಥ್ ಬಂಧಿತ ಆರೋಪಿ. ಆರೋಪಿಯಿಂದ 10 ಸಾವಿರ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಾಂಪುರದ ಸ್ವತಂತ್ರಪಾಳ್ಯದ ನಿವಾಸಿ ಕರ್ನಾಟಕ ರಾಜ್ಯ ಸ್ಲಂಬೋರ್ಡ್‍ನಿಂದ ನಿರ್ಮಿಸಿದ ಮನೆಯ ಮೇಲೆ ಕಟ್ಟಿಕೊಂಡಿರುವ ಮತ್ತೊಂದು ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಹಾಗೂ ಅವುಗಳಿಗೆ ಆರ್.ಆರ್ ಸಂಖ್ಯೆ ಪಡೆಯಲು ಶ್ರೀರಾಂಪುರ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಮೀಟರ್ ಅಳವಡಿಸಲು, ಆರ್.ಆರ್ ಸಂಖ್ಯೆ ನೀಡಲು ಲೈನ್‍ಮ್ಯಾನ್ ಮಂಜುನಾಥ್ ಮುಂಗಡವಾಗಿ 80 ಸಾವಿರ ರೂ. ಲಂಚ ಸ್ವೀಕರಿಸಿದ್ದ. ಆದರೂ ಮೀಟರ್ ಅಳವಡಿಸಿರಲಿಲ್ಲ. ಪುನಃ 10 ಸಾವಿರ ನೀಡಿದರಷ್ಟೇ ಮೀಟರ್ ಹಾಗೂ ಆರ್.ಆರ್ ಸಂಖ್ಯೆ ನೀಡುವುದಾಗಿ ಅರ್ಜಿದಾರರಿಗೆ ಬೇಡಿಕೆಯಿಟ್ಟಿದ್ದ.
ಅರ್ಜಿದಾರರು ನೀಡಿದ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು, ಲೈನ್‍ಮ್ಯಾನ್ ಮಂಜುನಾಥ್ನನ್ನು ಶ್ರೀರಾಂಪುರ ವಾರ್ಡ್ ಬೆಸ್ಕಾಂ ಕಚೇರಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುವಾಗ ಬಂಧಿಸಿದ್ದಾರೆ. ಈ ಕುರಿತ ವಿಚಾರಣೆ ಮುಂದುವರಿದಿದೆ.