ಆನೇಕಲ್(ಬೆಂಗಳೂರು): ರಾಜಧಾನಿಯ ಪಕ್ಕದಲ್ಲಿಯೇ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿ ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ 50 ಎಕರೆ ಜಾಗದಲ್ಲಿ 'ಡೇ ಕ್ರಾಲ್' ನಿರ್ಮಿಸಿ, ಚಿರತೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಆನೆ, ಹುಲಿ, ಸಿಂಹ, ಕರಡಿ ಸಫಾರಿಗಳು ಜನರನ್ನ ಹೆಚ್ಚು ಸೆಳೆದ ಬೆನ್ನಲ್ಲೇ ಚಿರತೆ ಸಫಾರಿ ಪ್ರಾಣಿ ಪ್ರಿಯರಿಗೆ ಇನ್ನಷ್ಟು ಕಾತರ ಮೂಡಿಸಿದೆ.
ಮಹಾರಾಷ್ಟ್ರದ ಗೊರೆವಾಡದಲ್ಲಿ ಮಾತ್ರ ಯಶಸ್ಸು ಕಂಡಿದ್ದ ಈ ಪ್ರಯೋಗ ದೇಶದ ಇತರೆ ಉದ್ಯಾನವನಗಳಲ್ಲಿ ಯಶಸ್ಸು ಕಂಡಿರಲಿಲ್ಲ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಸಿದ್ಧತೆ ಮಾಡಿಕೊಂಡಿದ್ದರೂ ಮಂದಗತಿಯಲ್ಲಿ ಕಾರ್ಯ ಸಾಗಿತ್ತು. ಈಗ ಉದ್ಯಾನವನದ ಸುತ್ತ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬನ್ನೇರುಘಟ್ಟದಲ್ಲಿಯೇ ಹುಟ್ಟಿ ಬೆಳೆದ ಚಿರತೆಗಳಾದ ಅಶೋಕ, ಲೋಕೇಶ್ ಮತ್ತು ಸಾನ್ವಿ ಹೆಸರಿನ ಚಿರತೆಗಳನ್ನು ಪ್ರಯೋಗಿಕವಾಗಿ ಚಿರತೆ ಸಫಾರಿಯ ಡೇ ಕ್ರಾಲ್ನಲ್ಲಿ ಬಿಡಲಾಗಿದೆ.
6 ಕಡೆ ಹೋಲ್ಡಿಂಗ್ ಹೌಸ್ ನಿರ್ಮಾಣ: ಚಿರತೆಗಳಿಗೆ ಪ್ರತಿದಿನ ಆಹಾರ ನೀಡಲು 6 ಕಡೆ ಹೋಲ್ಡಿಂಗ್ ಹೌಸ್ ನಿರ್ಮಾಣ ಮಾಡಲಾಗಿದೆ. ಒಂದು ಭಾಗದಲ್ಲಿ ಪ್ರಾಯೋಗಿಕವಾಗಿ ಬಿಡಲಾಗಿರುವ ಮೂರು ಚಿರತೆಗಳನ್ನು ಪ್ರತ್ಯೇಕವಾಗಿ ಮೂರು ಕೋಣೆಗಳಲ್ಲಿ ಇರಿಸಲಾಗುತ್ತಿದೆ. 12 ಕೋಣೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಷ್ಟು ಚಿರತೆಗಳನ್ನು ಬಿಡಬೇಕು ಹಾಗೂ ಅವುಗಳ ನಿರ್ವಹಣೆ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ. ಚಿರತೆ ಹೊರಹೋಗದಂತೆ 20 ಅಡಿಗೂ ಎತ್ತರದ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಇದರಿಂದ ಪ್ರೇಕ್ಷಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.