ಬೆಂಗಳೂರು: ಪ್ರಾದೇಶಿಕ ಪಕ್ಷ ಉಳಿಸಲೇಬೇಕೆಂಬ ಹಠದಿಂದ ವಿಧಾನಪರಿಷತ್ ಚುನಾವಣೆ ಮತ್ತು ಉಪಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಾಗೂ ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಇಂದು ನಡೆದ ಶಾಸಕಾಂಗ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು ಅತಿ ವಿಶ್ವಾಸದಲ್ಲಿವೆ. ಅವುಗಳ ಶಕ್ತಿ ಏನೆಂದು ಗೊತ್ತಿದೆ. ಪ್ರಾದೇಶಿಕ ಪಕ್ಷ ಉಳಿಸಲೇಬೇಕು ಎಂಬ ಹಠ ಇದೆ. ಪ್ರಾದೇಶಿಕ ಪಕ್ಷ ಉಳಿಸಲು ನೆರೆ ರಾಜ್ಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ಅದೇ ರೀತಿ ನಾವು ಹೋರಾಟ ಮಾಡುತ್ತೇವೆ ಎಂದರು.
ನನಗೆ ವಯಸ್ಸಾಯಿತು ಎಂದು ಸುಮ್ಮನೆ ಕೂರಲ್ಲ. ನನಗೆ ಛಲ ಇದ್ದು, ಪಕ್ಷದ ಉಳಿವಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ರಾಜರಾಜೇಶ್ವರಿನಗರ ಕ್ಷೇತ್ರದ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ. ಅಕ್ಟೋಬರ್ 22 ರಿಂದ ನಾನು ಶಿರಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತೇನೆ. ಕೆ.ಆರ್.ಪೇಟೆಯಲ್ಲಿ ಆದ ರೀತಿಯಲ್ಲಿಯೇ ಶಿರಾದಲ್ಲಿಯೂ ಮಾಡುತ್ತೇವೆ ಎನ್ನುವ ಉದ್ಧಟತನದ ಮಾತು ಹೇಳುತ್ತಿದ್ದಾರೆ. ನಾನು ಅಷ್ಟು ಶಕ್ತನಲ್ಲ. ಆದರೆ ಸಂಘಟನೆಯಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರು, ಯುವಕರು ಹೋರಾಟ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.