ಬೆಂಗಳೂರು: ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ, ಎಲ್ಲ ರೀತಿಯ ಆಲೋಚನೆ ಮಾಡಿಯೇ ಪಕ್ಷ ನಿರ್ಧಾರ ಕೈಗೊಂಡಿದೆ. ಪಕ್ಷದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪಕ್ಷದಿಂದ ಸೂಚನೆ ಬಂದಿತ್ತು. ನೀವು ಕೂಡ ಆಕಾಂಕ್ಷಿಯಾಗಿದ್ದೀರಿ, ಎಲ್ಲಾ ವ್ಯವಸ್ಥೆ ಮಾಡಿಕೊಂಡು ಕಚೇರಿಗೆ ಬನ್ನಿ ಎಂದಿದ್ದರು. ಅದರಂತೆ ನಾನು ಬಂದಿದ್ದೆ. ಆದರೆ, ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ಈಗ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಪಕ್ಷ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ, ಪಕ್ಷ ತೊರೆಯಲ್ಲ ಎಂದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್.. ಕಳೆದ 33 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ,ನಾನು ಕೊನೆಯವರೆಗೂ ಈ ಪಕ್ಷದಲ್ಲಿಯೇ ಇರುತ್ತೇನೆ. ಪಕ್ಷ ಅಧಿಕಾರದಲ್ಲಿ ಇಲ್ಲದಿರುವಾಗಲೂ ಪಕ್ಷದಲ್ಲೇ ಇದ್ದೇವೆ. ಈಗ ಅಧಿಕಾರದಲ್ಲಿದೆ, ಮುಂದೆಯೂ ಅಧಿಕಾರಕ್ಕೆ ಬರಲಿದೆ. ಹಾಗಾಗಿ, ಮುಂದೆ ನಮಗೆ ಅವಕಾಶ ಸಿಗುವ ವಿಶ್ವಾಸವಿದೆ. ಪಕ್ಷ ನಮ್ಮಂತಹ ಕಾರ್ಯಕರ್ತರನ್ನು ಗುರುತಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಣ ಸವದಿಗೆ ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಟಿಕೆಟ್ ಕೈತಪ್ಪಿದೆ ಎಂದೆನಿಸುವುದಿಲ್ಲ. ಎಲ್ಲ ರೀತಿಯ ವಿಚಾರಗಳನ್ನು ಪರಿಗಣಿಸಿ ಪಕ್ಷ ನಿರ್ಧಾರ ಕೈಗೊಂಡಿರುತ್ತದೆ. ಯಾವುದೇ ರೀತಿಯ ಅಸಮಾಧಾನ ನನಗಿಲ್ಲ ಎಂದು ಹೇಳಿದ್ದಾರೆ. ಟಿಕೆಟ್ ಸಿಗಲಿದೆ ಎಂದು ನನಗೆ ಎಲ್ಲರೂ ಶುಭಕೋರಿದರು, ಕಾರ್ಯಕರ್ತರು ಕೂಡ ಶುಭಕೋರಿದರು. ಆದರೆ, ಕೊನೆ ಕ್ಷಣದ ಬದಲಾವಣೆಯಲ್ಲಿ ಟಿಕೆಟ್ ಕೈತಪ್ಪಿದೆ, ಇದರಿಂದ ನನಗಿಂತ ಹೆಚ್ಚು ಕಾರ್ಯಕರ್ತರಿಗೆ ಬೇಸರವಾಗಿದೆ. ಆದರೂ ಮುಂದೆ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಓದಿ:ಬೆಸ್ಕಾಂ ಗ್ರಾಹಕರಿಗೆ ವಾಟ್ಸ್ಆ್ಯಪ್ ಸಹಾಯವಾಣಿ ಸೌಲಭ್ಯ