ಬೆಂಗಳೂರು: ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕ - 2020 ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಮೀಸಲಿಡುವ ಸಾದಿಲ್ವಾರು ನಿಧಿಯಲ್ಲಿ 80 ಕೋಟಿ ರೂ. ಬದಲಿಗೆ 500 ಕೋಟಿ ರೂ.ವರೆಗೆ ಹೆಚ್ಚಿಸಲು ವಿಧಾನಸಭೆ ಒಪ್ಪಿಗೆ ನೀಡಿದೆ.
ಸಿಎಂ ಯಡಿಯೂರಪ್ಪ ಅವರ ಪರವಾಗಿ ತಿದ್ದುಪಡಿ ವಿಧೇಯಕ ಮಂಡಿಸಿದ ಸಚಿವ ಜೆ. ಸಿ. ಮಾಧುಸ್ವಾಮಿ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಹಣ ಬಳಕೆ ಮಾಡಿಕೊಳ್ಳಲು ಅನುವಾಗುವಂತೆ ಸಾದಿಲ್ವಾರು ನಿಧಿಯಲ್ಲಿ ಆಪತ್ತು ಹಣ ಇಡಲಾಗುತ್ತಿತ್ತು. 1988ನೇ ಇಸವಿಯಲ್ಲಿ 2,380 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡುವಾಗ 80 ಕೋಟಿ ರೂ. ಸಾದಿಲ್ವಾರು ನಿಧಿ ಇಡಲು ಕಾನೂನಿನಲ್ಲಿ ಅವಕಾಶವಿತ್ತು. ಇದೀಗ ನಮ್ಮ ಬಜೆಟ್ ಗಾತ್ರ 2.37 ಲಕ್ಷ ಕೋಟಿಗಳಷ್ಟಾಗಿದ್ದರೂ ಈಗಲೂ 89 ಕೋಟಿ ರೂ. ಮಾತ್ರವೇ ಇದೆ ಎಂದು ವಿವರಿಸಿದರು.