ಬೆಂಗಳೂರು : ದೂರದರ್ಶನದ ಚಂದನ ವಾಹಿನಿಯಲ್ಲಿ ನಾಳೆಯಿಂದ ಸೇತುಬಂಧ ಕಲಿಕೆ ಆರಂಭವಾಗಲಿದೆ. ಕೋವಿಡ್ನ ಈ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆ ಉಂಟಾಗದಂತೆ ಕಲಿಕೆ ಮುಂದುವರೆಸಲು ಸರ್ಕಾರ ಈ ತಯಾರಿ ನಡೆಸಿದೆ.
ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ನಾಳೆಯಿಂದ 20 ದಿನಗಳ ಅವಧಿಗೆ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ (Bridge Course) ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿದೆ.
20 ದಿನಗಳ ಸೇತುಬಂಧ ತರಗತಿಗಳ ಬಳಿಕ 8 ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ದೈನಂದಿನ ಬೋಧನೆ ಮುಂದುವರೆಯಲಿವೆ. ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿಡಿಯೋ ಪಾಠಗಳನ್ನು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ.
ಶಿಕ್ಷಣ ಇಲಾಖೆಯ ಯುಟ್ಯೂಬ್ ವಾಹಿನಿಯಲ್ಲಿಯೂ ಸಹ ಈ ಎಲ್ಲಾ ತರಗತಿಗಳು ಲಭ್ಯವಿರಲಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಈ ತರಗತಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಮೆಂಟರ್ ಶಿಕ್ಷಕರನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಶಿಕ್ಷಕರು ಕಲಿಕೆಯ ಸಮರ್ಥ ಮೌಲ್ಯಮಾಪನಕ್ಕೆ ಶಿಕ್ಷಣ ಇಲಾಖೆಯು ವ್ಯವಸ್ಥಿತ ರೂಪುರೇಷೆಗಳನ್ನು ಜಾರಿಯಲ್ಲಿಟ್ಟಿದೆ.
ತರಗತಿಯ ಸಮಯಾವಧಿ :ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9:30 ರಿಂದ 11ಗಂಟೆಯವರೆಗೆ ಮತ್ತು 11:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ 4:30 ಮತ್ತು 5 ರಿಂದ 5-30ರವರೆಗೆ ಪ್ರಸಾರವಾಗಲಿದೆ. ಅಲ್ಲದೆ ದೂರದರ್ಶನದಲ್ಲಿ ತರಗತಿಯನ್ನು ವೀಕ್ಷಿಸಲಾಗದಿದ್ರೆ, ವಿದ್ಯಾರ್ಥಿಗಳು ಈ ಲಿಂಕ್ ಬಳಸಿ https://youtu.be/5EkXHaixtbw ಯುಟ್ಯೂಬ್ನಲ್ಲಿಯೂ ವಿಡಿಯೋ ನೋಡಬಹುದು.