ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕೆಲ ಬದಲಾವಣೆಯೊಂದಿಗೆ ವಿವಿಧ ನೇಮಕಾತಿಗಳನ್ನು ಮಾಡಲಾಗಿದೆ. ಸಚಿವ ಸ್ಥಾನ ಕಳೆದುಕೊಂಡಿರುವ ಲಕ್ಷ್ಮಣ ಸವದಿ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ ರಾಜ್ಯ ಮುಖ್ಯ ವಕ್ತಾರರಾಗಿದ್ದ ಕ್ಯಾ.ಗಣೇಶ್ ಕಾರ್ಣಿಕ್ ಅವರಿಗೆ ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾಲಕರ ಹುದ್ದೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಕ್ಕೂ ಮೊದಲು ರಾಜ್ಯ ಘಟಕದಲ್ಲಿ ವಿವಿಧ ನೇಮಕಾತಿಗಳನ್ನು ಮಾಡಲಾಗಿದೆ. ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರು ಮತ್ತು ವಿವಿಧ ಜಿಲ್ಲೆಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದ ಲಕ್ಷ್ಮಣ ಸವದಿ ಅವರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.
ಇದೀಗ ಅವರಿಗೆ ಸಂಘಟನೆಯಲ್ಲಿ ಜವಾಬ್ದಾರಿ ನೀಡಲಾಗಿದೆ. ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರೊಂದಿಗೆ ಉಡುಪಿಯ ನಯನಾ ಗಣೇಶ್ ಅವರಿಗೂ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮೈಸೂರಿನ ಎಂ.ಜಿ ಗಣೇಶ್ ರಾಜ್ಯ ಮುಖ್ಯ ವಕ್ತಾರ, ಕೋಷ್ಠಗಳ ರಾಜ್ಯ ಸಹ ಸಂಯೋಜಕರಾಗಿ ಜಯತೀರ್ಥ ಕಟ್ಟಿ, ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಹೆಚ್ ಯೋಗೇಂದ್ರ, ಸಹ ಸಂಚಾಲಕರಾಗಿ ವಿನೋದ್ ಪಾಟೀಲ್, ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಗೋವಿಂದ ಬಾಂಡೇಕರ್, ಸಹ ಸಂಚಾಲಕರಾಗಿ ನಾಗಪ್ಪ ಅಂಬಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಬಸವರಾಜ ಮತ್ತಿಮೋಡ ಅವರನ್ನು ನೇಮಿಸಲಾಗಿದೆ.
ಮಂಡ್ಯ ಜಿಲ್ಲಾ ಪ್ರಭಾರಿಯಾಗಿ ಜಗದೀಶ್ ಹಿರೇಮನಿ, ಯಾದಗಿರಿ ಜಿಲ್ಲಾ ಪ್ರಭಾರಿಯಾಗಿ ಅಮರನಾಥ ಪಾಟೀಲ್, ದಾವಣಗೆರೆ ಜಿಲ್ಲಾ ಪ್ರಭಾರಿಯಾಗಿ ಶಿವಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿ ಪ್ರೇಮಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿಯಾಗಿ ಕೆವಿ ಶಿವಪ್ಪ, ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಮುರಹರಗೌಡ, ವಿಜಯನಗರ ಜಿಲ್ಲಾ ಅಧ್ಯಕ್ಷರಾಗಿ ಚನ್ನಬಸವನಗೌಡ ಅವರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಆದೇಶಿಸಿದ್ದಾರೆ.
(ಇದನ್ನೂ ಓದಿ:ಹಂಸಲೇಖ ಏನ್ ಮಹಾ ಅಪರಾಧ ಮಾಡಿದ್ರಾ? ಒಂದು ಹೇಳಿಕೆಗೆ ಎಲ್ಲರೂ ತಿರುಗಿಬಿದ್ರು : ಸಿದ್ದರಾಮಯ್ಯ)