ಬೆಂಗಳೂರು:ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಧರಿಸುವ ವಿಚಾರವಾಗಿ ನೀಡಿರುವ ವಿವಾದಿತ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಐಎಲ್ಎಜೆ ಹೆಸರಿನ ವಕೀಲರ ಸಂಘಟನೆಯೊಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.
'ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ತಾವು ನೀಡಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತದ ಉಡುಪುಗಳನ್ನು ಧರಿಸಿ ಪರೀಕ್ಷಾ ಕೊಠಡಿಗಳಿಗೆ ಬರುವಂತಿಲ್ಲ. ಬಂದರೂ ಕೊಠಡಿ ಒಳಗೆ ಪ್ರವೇಶವಿಲ್ಲ. ಅಹಂಕಾರ ಬಿಟ್ಟು ಪರೀಕ್ಷೆಗೆ ಬನ್ನಿ, ಬಹುತೇಕ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಅಧಿಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದೀರಿ. ಆದರೆ, ನಿಮ್ಮ ಹೇಳಿಕೆಗೂ ಸರ್ಕಾರ ಸಮವಸ್ತ್ರ ಕುರಿತು ಹೊರಡಿಸಿರುವ ಅಧಿಸೂಚನೆಗೂ ಭಿನ್ನತೆ ಇದೆ' ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.