ಬೆಂಗಳೂರು:ಬೆಳಗಾವಿ, ಬೆಂಗಳೂರಿಗಷ್ಟೇ ಸರ್ಕಾರ ಸೀಮಿತವಾಗಬಾರದು. ಗೆದ್ದವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಲವರು ಮಾತ್ರ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಅಂಶ ಮನವರಿಕೆ ಮಾಡಲು ಸಭೆ ನಡೆಸಲಾಗಿದೆಯೇ ಹೊರತು ಯಾವುದೇ ಬಂಡಾಯ ಚಟುವಟಿಕೆ ನಡೆಸುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಇದು ಒತ್ತಡ ತರುವ ತಂತ್ರವಲ್ಲ. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಮೂರು ವರ್ಷ ಮುಂದುವರೆಯಲಿ, ಬಹಳ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲ. ಅವಕಾಶ ಸಿಗಲಿ ಎನ್ನುವುದು ನಮ್ಮ ಒತ್ತಾಯ ಎಂದರು.
ಅಧಿವೇಶನದ ಒಳಗಡೆ ಬಿಲ್ ಪಾಸ್ ಆಗಬೇಕು. ಅಂದರೆ ಶಾಸಕರಾಗಿ ಚುನಾಯಿತರಾದವರಿಂದ ಮಾತ್ರ ಸಾಧ್ಯ. ಹಾಗಾಗಿ ಎಲ್ಲರ ಅಪೇಕ್ಷೆ, ಗೆದ್ದವರಿಗೆ ಅವಕಾಶ ಕೊಡಬೇಕು ಎನ್ನುವುದಾಗಿದೆ. ಗೆದ್ದವರು ಹಿರಿಯರಿದ್ದಾರೆ, ವರಿಷ್ಠರು ಗಮನಿಸಬೇಕು. ಇದು ಬಂಡಾಯವಲ್ಲ, ಭಿನ್ನಮತವಿಲ್ಲ. ನಮ್ಮ ಅನೇಕ ಶಾಸಕರ ಭಾವನೆಗಳನ್ನು ಸಿಎಂ ಮತ್ತು ಪಕ್ಷದ ಅಧ್ಯಕ್ಷರಿಗೆ ಪ್ರಸ್ತಾಪ ಮಾಡುತ್ತೇವೆ ಎಂದರು.
ಸೋತವರಿಗೆ ಸಚಿವ ಸ್ಥಾನ ಕೊಡುತ್ತಾ ಹೋದರೆ ಗೆದ್ದವರು ಎಲ್ಲಿಗೆ ಹೋಗಬೇಕು? ನಾವೂ ಕೂಡ ಸೋತಿದ್ದೆವು. ಆಗ ಯಾವುದೇ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ದಾವಣಗೆರೆ ಜಿಲ್ಲೆಗೂ ಆದ್ಯತೆ ಕೊಡಬೇಕು. ರೇಣುಕಾಚಾರ್ಯಗೆ ಸಚಿವ ಸ್ಥಾನ ಕೊಡಿ ಅಂತಲ್ಲ. ಮಧ್ಯಕರ್ನಾಟಕಕ್ಕೂ ಸಚಿವ ಸ್ಥಾನ ಕೊಡಬೇಕು. ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದು ನಮ್ಮ ಮನವಿ ಎಂದು ಪರೋಕ್ಷವಾಗಿ ತಮಗೂ ಸಚಿವ ಸ್ಥಾನ ಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದರು.
ಶಾಸಕರ ಪ್ರತ್ಯೇಕ ಸಭೆಗೆ ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಭಾಗಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ರುದ್ರೇಶ್ ಸಮಾನಮನಸ್ಕರು. ನಾವು ಒಂದೇ ಕುಟುಂಬದ ಸದಸ್ಯರು, ರುದ್ರೇಶ್ ಇಲ್ಲಿಗೆ ಟೀ ಕುಡಿಯಲು ಬಂದಿದ್ದರು. ಹಾಗೆಯೇ ನಮ್ಮ ಭೇಟಿಗೆ ಬಂದರಷ್ಟೇ ಎಂದು ಸಮಜಾಯಿಷಿ ನೀಡಿದರು.