ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ (ಸ್ವಾತಂತ್ರ‍್ಯ ಅಮೃತ ಮಹೋತ್ಸವ) ಕಾರ್ಯಕ್ರಮವನ್ನು ಬಿಬಿಎಂಪಿ ಹಮ್ಮಿಕೊಂಡಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಆಜಾದಿ ಕಾ ಅಮೃತ ಮಹೋತ್ಸವದ ವಿವಿಧ ಯೋಜನೆಗಳಿಗೆ ಚಾಲನೆ - ಬಿಬಿಎಂಪಿ ಮುಖ್ಯ ಆಯುಕ್ತ
ಅಕ್ಟೋಬರ್ 1 ರಿಂದ 3ರ ವರೆಗೆ ಮೂರು ದಿನ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದೇ ಸೂರಿನಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏಕೀಕೃತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿ ಸ್ಮಾರ್ಟ್ ಸಿಟಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ದೇಶದ ಆಯ್ದ 100 ಸ್ಮಾರ್ಟ್ ಸಿಟಿಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಅ.1 ರಿಂದ 3 ರವರೆಗೆ ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಪೈಕಿ ಇಂದು ಮಹತ್ವದ ಯೋಜನೆಯಾದ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್(ಐಸಿಸಿಸಿ) ಯೋಜನೆಯು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಂದೇ ಸೂರಿನಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏಕೀಕೃತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಲ್ಲಿ ‘ಫ್ರೀಡಂ ಫಾರ್ ವೇಸ್ಟ್’, ‘ಫ್ರೀಡಂ ಫಾರ್ ಟ್ರಾಫಿಕ್’ ಹಾಗೂ ‘ಫ್ರೀಡಂ ಫಾರ್ ಪೊಲ್ಯೂಷನ್’ ಎಂಬ ಮೂರು ಪರಿಕಲ್ಪನೆಗಳನ್ನಿಟ್ಟುಕೊಂಡು ಐಸಿಸಿಸಿಯು ಹೇಗೆ ಕಾರ್ಯನಿರ್ವಹಿಸಲಿಸಿದೆ, ನಾಗರಿಕರಿಗೆ ಯಾವ ರೀತಿ ಉಪಯೋಗವಾಗಲಿದೆ ಎಂಬುದರ ಬಗ್ಗೆ ಅಧಿಕಾರಿಗಳು, ವಿದ್ಯಾರ್ಥಿಗಳು, ನಾಗರಿಕರು ಹಾಗೂ ಇನ್ನಿತರರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
1 ಅಕ್ಟೋಬರ್ ರಿಂದ 3 ಅಕ್ಟೋಬರ್ 2021 ರವರೆಗೆ 75 ಗಂಟೆಗಳ ಪ್ಲೇಸ್ ಮೇಕಿಂಗ್ ಮ್ಯಾರಥಾನ್ ಅನ್ನು ಹಮ್ಮಿಕೊಂಡಿದ್ದು, ಶಾಂತಿನಗರ ಮುಖ್ಯ ರಸ್ತೆಯಲ್ಲಿ ಸ್ಲೋ ಸ್ಟ್ರೀಟ್ ನಡಿ ತಡೆಗೋಡೆಗಳು, ಸೂಚನಾ ಫಲಕಗಳನ್ನೊಳಗೊಂಡ ಪಾದಚಾರಿ ಸ್ನೇಹಿ, ಸಂಚಾರ ಸ್ನೇಹಿಯಾದ ರಸ್ತೆ ನಿರ್ಮಾಣ ಮಾಡುವುದು. ಇದಲ್ಲದೆ ಸಾರ್ವಜನಿಕ ಸ್ಥಳಗಳ ರೂಪಾಂತರ ಹಾಗೂ ಈ ಸ್ಥಳದೊಂದಿಗೆ ಜನರನ್ನು ಇನ್ನಷ್ಟು ಬೆಸೆಯುವ ಗುರಿಯೊಂದಿಗೆ ಅಕ್ಕಿತಿಮ್ಮನಹಳ್ಳಿ ಮತ್ತು ಅಯ್ಯಪ್ಪ ಗಾರ್ಡನ್ ಅಂಗನವಾಡಿಗಳ ಅಭಿವೃದ್ಧಿ, ಕೆ.ಆರ್ ಮಾರುಕಟ್ಟೆಯಲ್ಲಿ ಪ್ಲೇಸ್ ಮೇಕಿಂಗ್, ಬಾಲಭವನದಲ್ಲಿ ಪ್ಲೇಸ್ ಮೇಕಿಂಗ್ ಮಾಡಲಾಗುತ್ತಿದೆ ಎಂದರು.
'ಸ್ವಾತಂತ್ರ‍್ಯಕ್ಕಾಗಿ ಸೈಕಲ್' ಎಂಬ ಘೋಷವಾಖ್ಯದಡಿ ಅ.2ರಂದು ಬೆಳಿಗ್ಗೆ 7 ರಿಂದ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಸೈಕ್ಲಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧಾನಸೌಧದ ಪೂರ್ವ ದ್ವಾರದಿಂದ ಅಂಬೇಡ್ಕರ್ ವೀಧಿ-ತಿಮ್ಮಯ್ಯ ವೃತ್ತದ ಮೂಲಕ – ರಾಜಭವನ ರಸ್ತೆ- ಪ್ಲಾನಿಟೋರಿಯಂ ರಸ್ತೆ-ಮಿಲ್ಲರ್ಸ್ ರಸ್ತೆ-ಚಾಲುಕ್ಯ ವೃತ್ತ-ರೇಸ್ಕೋರ್ಸ್ ರಸ್ತೆ-ಮೌರ್ಯ ಸರ್ಕಲ್- ಕೆ.ಆರ್.ವೃತ್ತ- ವಿಧಾನಸೌಧ ಪೂರ್ವ ದ್ವಾರದವರೆಗೆ ಸೈಕ್ಲಥಾನ್ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಹಾಗೂ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು.