ರಾಜ್ಯದಲ್ಲಿ ಕೊರೊನಾ ಸ್ಫೋಟ: ಬೆಚ್ಚಿ ಬೀಳುವಂತಿದೆ ಎರಡು ವಾರದ ಅಂಕಿ-ಅಂಶ! - ಕೊರೊನಾ ಅಂಕಿಅಂಶಗಳು
ಕೋವಿಡ್-19 ನಿಯಂತ್ರಣದಲ್ಲಿ ಮಾದರಿ ರಾಜ್ಯವಾಗಿದ್ದ ಕರ್ನಾಟಕ ಇದೀಗ ಕೊರೊನಾ ನಿಯಂತ್ರಣ ವಿಚಾರದಲ್ಲಿ ಹಿಡಿತ ಕಳೆದುಕೊಳ್ಳುತ್ತಿದೆ.
ವಿಧಾನಸೌಧ
By
Published : Jul 6, 2020, 5:24 PM IST
|
Updated : Jul 6, 2020, 6:00 PM IST
ಬೆಂಗಳೂರು: ಇಡೀ ದೇಶದಲ್ಲೇ ಕೋವಿಡ್-19 ನಿಯಂತ್ರಣದಲ್ಲಿ ಮಾದರಿ ರಾಜ್ಯವಾಗಿದ್ದ ಕರ್ನಾಟಕ ಇದೀಗ ಕೊರೊನಾ ನಿಯಂತ್ರಣ ವಿಚಾರದಲ್ಲಿ ಹಿಡಿತ ಕಳೆದುಕೊಳ್ಳುತ್ತಿದೆ. ಕಳೆದ 100 ದಿನದಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಕೇವಲ ಎರಡು ವಾರಗಳಲ್ಲಿ ದ್ವಿಗುಣಗೊಂಡು ಆತಂಕ ಸೃಷ್ಟಿಸಿದೆ.
ಕೇರಳ ಹೊರತುಪಡಿಸಿದರೆ ಕರ್ನಾಟಕ ಇಡೀ ದೇಶದಲ್ಲಿ ಕೊರೊನಾಗೆ ಕಡಿವಾಣ ಹಾಕಿದ್ದ ರಾಜ್ಯ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಕರ್ನಾಟಕದ ಕೊರೊನಾ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕರ್ನಾಟಕ ಮಾದರಿ ಅನುಸರಿಸಿ ಎಂದು ಇತರ ರಾಜ್ಯಗಳಿಗೆ ಸಲಹೆ ನೀಡಿದ್ದರು. ಆದರೆ ಈಗ ಚಿತ್ರಣವೇ ಬದಲಾಗಿದೆ. ಕೇವಲ ಎರಡು ವಾರದಲ್ಲಿ ಕೊರೊನಾ ಸಮುದಾಯದ ಸನಿಹಕ್ಕೆ ಬಂತು ನಿಂತಿದೆ.
ಕೊರೊನಾ ಸ್ಫೋಟದ ವಿವರ
ಮಾರ್ಚ್ನಿಂದ ಜೂನ್ 22ರವರೆಗೆ ರಾಜ್ಯದಲ್ಲಿ ಒಟ್ಟು 9399 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 3523 ಸಕ್ರಿಯ ಪ್ರಕರಣಗಳು ವರದಿಯಾಗಿದ್ದವು. 142 ಮಂದಿ ಮರಣ ಹೊಂದಿ, 5,730 ಸೋಂಕಿತರು ಗುಣಮುಖರಾಗಿದ್ದರು. ಗುಣಮುಖರಾಗುತ್ತಿರುವವರ ಪ್ರಮಾಣ ಬಹುತೇಕ ಶೇಕಡಾ 60 ದಾಟಿತ್ತು. ಇದು ಮೂರೂವರೆ ತಿಂಗಳ ಅಂಕಿ-ಅಂಶ.
ಆದರೆ ಕಳೆದ ಜೂನ್ 22ರಿಂದ ಜುಲೈ 5ರವರೆಗೆ ಕೇವಲ 14 ದಿನಗಳಲ್ಲಿ ಹೊಸದಾಗಿ 14,080 ಪ್ರಕರಣ ಪಾಸಿಟಿವ್ ಬಂದಿವೆ. 9728 ಪ್ರಕರಣಗಳು ಸೇರ್ಪಡೆಯಾಗಿವೆ. 230 ಜನರು ಕೊರೊನಾದಿಂದ ಮೃತಪಟ್ಟು, 4117 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಕಥೆಯೂ ಇದಕ್ಕೆ ಹೊರತಲ್ಲ!
ಮಾರ್ಚ್ನಿಂದ ಜೂನ್ 22ರವರೆಗೆ ನಗರದಲ್ಲಿ ಒಟ್ಟು 1398 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 919 ಸಕ್ರಿಯ ಪ್ರಕರಣಳಿದ್ದವು. 67 ಸಾವು ಸಂಭವಿಸಿದ್ದವು. ಆದರೆ 411 ಸೋಂಕಿತರು ಗುಣಮುಖರಾಗಿದ್ದರು. ಸಕ್ರಿಯ ಪ್ರಮಾಣಕ್ಕಿಂತ ಗುಣಮುಖ ಪ್ರಮಾಣ ಬಹುತೇಕ ಶೇ. 60 ದಾಟಿತ್ತು. ಇದು ಮೂರೂವರೆ ತಿಂಗಳ ಅಂಕಿ-ಅಂಶ. ಆದರೆ ಕಳೆದ ಜೂನ್ 22ರಿಂದ ಜುಲೈ 5ರವರೆಗೆ ಕೇವಲ 14 ದಿನಗಳಲ್ಲಿ ಹೊಸದಾಗಿ 8182 ಪ್ರಕರಣ ಪಾಸಿಟಿವ್ ಬಂದಿವೆ. 7248 ಸಕ್ರಿಯ ಕೇಸ್ ಸೇರ್ಪಡೆಯಾಗಿದೆ. 78 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. 856 ಸೋಂಕಿತರು ಗುಣಮುಖರಾಗಿದ್ದಾರೆ. ಗುಣಮುಖರಾದವರ ಪ್ರಮಾಣ ಶೇ. 50ಕ್ಕಿಂತ ಕೆಳಗೆ ಕುಸಿದು ಆತಂಕ ಸೃಷ್ಟಿಸಿದೆ.
ಇದೇ ರೀತಿ ಮುಂದಿನ ಎರಡು ವಾರ ಮುಂದುವರೆದಲ್ಲಿ ಪ್ರತಿ ದಿನ ಬಿಡುಗಡೆಯಾಗುವವರನ್ನು ಹೊರತುಪಡಿಸಿ ಸಾವಿರ ಸಂಖ್ಯೆಯಲ್ಲಿ ಹೊಸ ಸೇರ್ಪಡೆಯಾಗುವ ಆತಂಕ ಎದುರಾಗಿದೆ. ಈಗಿರುವ ಸಕ್ರಿಯ ಪ್ರಮಾಣ ದ್ವಿಗುಣಗೊಳ್ಳಲಿದ್ದು, ತಿಂಗಳ ಕೊನೆಯ ವಾರದಲ್ಲಿ ರಾಜ್ಯದ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 30 ಸಾವಿರ ತಲುಪುವ ಸಾಧ್ಯತೆಯನ್ನು ತಜ್ಞರ ಸಮಿತಿ ಅಂದಾಜಿಸಿದೆ. ಇದರಲ್ಲಿ ಬೆಂಗಳೂರಿನಲ್ಲೇ ಅರ್ಧದಷ್ಟು ಪ್ರಕರಣ ವರದಿಯಾಗಲಿದ್ದು, ಬೆಡ್ಗಳ ಸಂಖ್ಯೆ ಹಾಗೂ ವೈದ್ಯರು, ದಾದಿಯರ ಕೊರತೆ ಎದುರಿಸಬೇಕಾದ ಸನ್ನಿವೇಶ ನಿರ್ಮಾಣವಾಗಲಿದೆ.