ಬೆಂಗಳೂರು: ಇನ್ನು ಮುಂದೆ ರೈತರು ತಾಲೂಕು ಕಚೇರಿ, ಕಂದಾಯ ಇಲಾಖೆಗೆ ಎಡತಾಕುವ ಅಗತ್ಯವಿಲ್ಲ. ತಮ್ಮ ಜಮೀನಿನ ಮ್ಯಾಪ್ ಅನ್ನು ಮೊಬೈಲ್ನಲ್ಲೇ ಪಡೆಯುವ ವ್ಯವಸ್ಥೆ ಬಂದಿದೆ. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಮ್ಯಾಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಕಂದಾಯ ಇಲಾಖೆಯು ಈ ವ್ಯವಸ್ಥೆಯನ್ನು ರೂಪಿಸಿದ್ದು, ತಮ್ಮ ಜಮೀನಿನ ಸರ್ವೇ ನಂಬರ್ ಸುತ್ತಮುತ್ತ ಯಾವ, ಯಾವ ಸರ್ವೇ ನಂಬರ್ಗಳಿವೆ. ಜಮೀನಿನ ಹತ್ತಿರ ಕೆರೆಕಟ್ಟೆ, ಗುಡ್ಡಗಳು, ಜಮೀನಿನ ಸುತ್ತಮುತ್ತ ಬಂಡಿದಾರಿ, ಕಾಲುದಾರಿ, ಕಾಲುವೆ, ಊರಿನ ಅಕ್ಕಪಕ್ಕದ ಊರಿಗೆ ಹೋಗುವ ದಾರಿಗಳ ಮಾಹಿತಿಯೂ ಈ ಮ್ಯಾಪ್ನಲ್ಲಿ ಸಿಗುತ್ತದೆ. ರೈತರು ತಮ್ಮೂರಿನ ಗಡಿರೇಖೆಗಳನ್ನು ನೋಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರು ಆಯ್ಕೆ ಮಾಡಿಕೊಂಡ ಗ್ರಾಮಕ್ಕೆ ಅಕ್ಕಪಕ್ಕದ ಗ್ರಾಮಗಳಿಂದ ಬರುವ ರಸ್ತೆ ಎಲ್ಲಿಂದ ಹಾದು ಹೋಗುತ್ತದೆ. ತಾತ ಅಜ್ಜಂದಿರ ಕಾಲದಲ್ಲಿ ಅಕ್ಕಪಕ್ಕದ ಊರಿಗೆ ಹೋಗುವ ದಾರಿ, ಬಂಡಿದಾರಿಯ ಎಲ್ಲಿಂದ ಹಾದು ಹೋಗಿತ್ತು ಎಂಬುದನ್ನು ಸಹ ನೋಡಬಹುದು. ನಿಮ್ಮೂರಿನ ಸುತ್ತಮುತ್ತ ಹಳ್ಳವಿದ್ದರೆ ಎಲ್ಲಿಂದ ಹರಿದು ಬರುತ್ತಿದೆ ಮತ್ತು ಹಳ್ಳ ಯಾವ ಸರ್ವೇ ನಂಬರ್ ಹತ್ತಿರದಿಂದ ಯಾವ ಊರಿಗೆ ಹರಿದುಹೋಗುತ್ತದೆ ಎಂದು ಹರಿಯುವ ದಿಕ್ಕೂ ಸಹ ಈ ಮ್ಯಾಪ್ನಲ್ಲಿರುತ್ತದೆ. ಮ್ಯಾಪ್ ಎಡಭಾಗದಲ್ಲಿ ಹಳ್ಳ, ಕೊಳ್ಳ, ಕೆರೆ, ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಗುರುತಿಸಲು ಮಾರ್ಕ್ ಮಾಡಲಾಗಿರುತ್ತದೆ. ಅದರ ಆಧಾರದ ಮೇಲೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.
ರೈತರು ಮಾಡಬೇಕಾಗಿರುವುದಿಷ್ಟೆ: ರೈತರು ತಮ್ಮ ಮೊಬೈಲ್ನಲ್ಲೇ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು www.landrecords.Karnataka.gov.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ಕಂದಾಯ ಇಲಾಖೆಯ ಅಂದರೆ ರೆವಿನ್ಯೂ ಮ್ಯಾಪ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ರೈತರು ಇಲ್ಲಿ ತಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಂಡು ಕ್ಯಾಡಸ್ಟ್ರಾಲ್ ಮಾಯ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈತರು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣುತ್ತದೆ.