ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಚುರುಕುಗೊಂಡಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಮೆಟ್ರೋದ ರೀಚ್-1E 15.05.ಕಿ.ಮೀ.ನ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ವರೆಗೆ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ 1,77,694.12 ಚ.ಮೀ ವಿಸ್ತೀರ್ಣದ ಪ್ರದೇಶವು ವಯಾಡಕ್ಟ್ ಮತ್ತು ನಿಲ್ದಾಣಗಳಿಗೆ ಅಗತ್ಯವಾಗಿದೆ. ಅದರಲ್ಲಿ 1,73,786.88 ಚ.ಮೀ ಪ್ರದೇಶವನ್ನು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಕಾಡುಗೋಡಿ ಡಿಪೋಗೆ ಬೇಕಾದ 45 ಎಕರೆ ಅರಣ್ಯ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಲಾಗಿದೆ.
ಹಾಗೆಯೇ, ರೀಚ್-3C ನಾಗಸಂದ್ರದಿಂದ ಬಿ.ಐ.ಇ.ಸಿ ವರೆಗೆ -3 ಕಿ.ಮೀ.ನ ಈ ವ್ಯಾಪ್ತಿಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಜೊತೆಗೆ ಕೊತ್ತನೂರು ಡಿಪೋಗೆ ಅಗತ್ಯವಿರುವ 32.6 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಜಿಂದಾಲ್ ಮತ್ತು ಪ್ರೆಸ್ಟೀಜ್ ಲೇಔಟ್ ಮೂಲಕ ಅಂಚೆಪಾಳ್ಯ ಮತ್ತು ಇತರ ಹಳ್ಳಿಗಳಿಂದ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ರಸ್ತೆ ಸಂಪರ್ಕವನ್ನು ಒದಗಿಸಲು 1885.11 ಚ.ಮೀ ಹೆಚ್ಚುವರಿ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು, ನ್ಯಾಯಾಲಯವು ರದ್ದುಗೊಳಿಸಿದೆ. ಹೀಗಾಗಿ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಿಎಂಆರ್ಸಿಎಲ್ ಮುಂದಾಗುತ್ತಿದೆ.