ಕರ್ನಾಟಕ

karnataka

ETV Bharat / city

ಅರ್ಕಾವತಿ ಬಡಾವಣೆಗೆ ಭೂಸ್ವಾಧೀನ; ಅಂತಿಮ ಅಧಿಸೂಚನೆ ಎತ್ತಿ ಹಿಡಿದ ಹೈಕೋರ್ಟ್ - ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್

ಅರ್ಕಾವತಿ ಬಡಾವಣೆಗೆ ಭೂಸ್ವಾಧೀನ ಮಾಡುವ ಸಂಬಂಧ ಸುಮಾರು 800ಕ್ಕೂ ಅಧಿಕ ಪುಟಗಳ ತೀರ್ಪು ಪ್ರಕಟಿಸಿರುವ ಹೈಕೋರ್ಟ್‌, ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಎತ್ತಿ ಹಿಡಿದಿದೆ. ಇದೇ ವೇಳೆ ಬಡಾವಣೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ರಿಡೂ ಮತ್ತು ಡಿನೋಟಿಫಿಕೇಷನ್ ಆದೇಶಗಳನ್ನು ಪರಿಶೀಲಿಸಲು ತ್ರಿಸದಸ್ಯ ಸಮಿತಿ ರಚಿಸಲು ಸೂಚಿಸಿದೆ.

Land acquisition for Arkavathy layout; The High Court upheld the final notification
ಅರ್ಕಾವತಿ ಬಡಾವಣೆಗೆ ಭೂಸ್ವಾಧೀನ; ಅಂತಿಮ ಅಧಿಸೂಚನೆ ಎತ್ತಿ ಹಿಡಿದ ಹೈಕೋರ್ಟ್

By

Published : Sep 28, 2021, 1:45 AM IST

ಬೆಂಗಳೂರು : ಅರ್ಕಾವತಿ ಬಡಾವಣೆಗೆ ಭೂಸ್ವಾಧೀನ ಮಾಡುವ ಸಂಬಂಧ 2014ರ ಜೂನ್‌ನಲ್ಲಿ ಹೊರಡಿಸಿದ್ದ ಎರಡನೇ ಅಂತಿಮ ಅಧಿಸೂಚನೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ಬಾಕಿ ಇರುವವರಿಗೆ 3 ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ನಿರ್ದೇಶಿಸಿದೆ.

ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೆ.ಪಿ.ಅಂಜನಪ್ಪ ಸೇರಿದಂತೆ 16 ಹಳ್ಳಿಗಳ ಜನರು ಸಲ್ಲಿಸಿದ್ದ ಸುಮಾರು 450 ಅರ್ಜಿಗಳನ್ನು ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ, ಬಡಾವಣೆಗೆ ಹೊಂದಿಕೊಂಡ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿಹಿಡಿದಿದೆ.

ಸುಮಾರು 800ಕ್ಕೂ ಅಧಿಕ ಪುಟಗಳ ತೀರ್ಪು ಪ್ರಕಟಿಸಿರುವ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ 2005ರಲ್ಲಿ ಹೈಕೋರ್ಟ್ ಮತ್ತು 2010ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಅಂಶಗಳನ್ನು ಉಲ್ಲೇಖಿಸಿದೆ. ಇದೇ ವೇಳೆ ಬಡಾವಣೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ರಿಡೂ ಮತ್ತು ಡಿನೋಟಿಫಿಕೇಷನ್ ಆದೇಶಗಳನ್ನು ಪರಿಶೀಲಿಸಲು ನಿವೃತ್ತ ನ್ಯಾ. ಕೆ.ಎನ್. ಕೇಶವನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಸಂದೀಪ್ ದವೆ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಎಸ್ ಮೇಘರಿಕ್ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಲು ಸೂಚಿಸಿದೆ.

'3 ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡಬೇಕು':

ಈ ಸಮಿತಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿಗೆ ಬದ್ದವಾಗಿ ಸರ್ಕಾರಗಳು ರಿಡೂ, ಡಿನೋಟಿಫಿಕೇಷನ್ ಮಾಡಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ನೀಡಬೇಕು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದೇ ವೇಳೆ ಬಡಾವಣೆಯಲ್ಲಿ ಯಾರಿಗೆಲ್ಲಾ ನಿವೇಶನ ಹಂಚಿಕೆ ಬಾಕಿ ಇದೆಯೋ ಅವರಿಗೆ 3 ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡಬೇಕು. ಈಗಾಗಲೇ ಹಂಚಿಕೆಯಾಗಿದ್ದರೆ ನಿವೇಶನವನ್ನು ಒದಗಿಸಬೇಕು ಮತ್ತು ಮಾರಾಟ ಒಪ್ಪಂದ ಮಾಡಿಕೊಡಬೇಕು. ಕಂದಾಯ ನಿವೇಶನಗಳ ಸಂಬಂಧ ಸಮಸ್ಯೆಗಳಿದ್ದರೆ ನ್ಯಾಯಾಲಯದ ತೀರ್ಪಿನ ಅನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿದೆ.

ಇನ್ನು, ಬಿಡಿಎ ಬಡಾವಣೆಗೆ ಸಂಬಂಧಿಸಿದಂತೆ 2003 ಫೆ.3ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದಕ್ಕಿಂತ ಮುಂಚೆ ಮನೆಗಳನ್ನು ನಿರ್ಮಿಸಿದ್ದರೆ, ಅವುಗಳು ಕಾನೂನು ಬದ್ಧವಾಗಿ ಉಳಿಯಲಿವೆ. ಅವುಗಳಿಗೆ ತೊಂದರೆಯಾಗುವುದಿಲ್ಲ. ಆದರೆ ಸಿಮೆಂಟ್ ಶೀಟ್, ಹೆಂಚಿನ ಛಾವಣಿಗಳ ಕಟ್ಟಡಗಳಿದ್ದರೆ ಅವುಗಳನ್ನು ಉಳಿಸಲಾಗದು. ಆ ಬಗ್ಗೆಯೂ ತ್ರಿಸದಸ್ಯ ಸಮಿತಿ ಬಿಡಿಎಗೆ ವರದಿ ನೀಡಬೇಕು. ಬಿಡಿಎ ವರದಿಯಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ABOUT THE AUTHOR

...view details