ಬೆಂಗಳೂರು : ಕೊರೊನಾ ಎರಡನೇ ಅಲೆಗೆ ಬ್ರೇಕ್ ಹಾಕಲು ಸರ್ಕಾರ ಲಾಕ್‌ಡೌನ್ ಹೇರಿದೆ. ಲಾಕ್‌ಡೌನ್ ಏಟಿಗೆ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೆ ವಲಸೆ ಹೋಗಿದ್ದಾರೆ.
ಹೀಗೆ ಕೆಲಸ ಕಳೆದುಕೊಂಡ ಜನರಿಗೆ ವರದಾನವಾಗುತ್ತಿರುವುದು ನರೇಗಾ ಯೋಜನೆ. ಆದರೆ, ಅನುದಾನ ಕೊರತೆ, ವಿಳಂಬ ಪಾವತಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕಾಡುತ್ತಿದೆ.
ರಾಜ್ಯದಲ್ಲಿನ 'ಉದ್ಯೋಗ ಖಾತ್ರಿ' ಯೋಜನೆಯ ಸ್ಥಿತಿಗತಿಯ ಸಮಗ್ರ ಚಿತ್ರಣ :
ಕೋವಿಡ್-19 ಎರಡನೇ ಅಲೆ ಇಡೀ ಮನುಕುಲವನ್ನು ಸಾವಿನ ದವಡೆಗೆ ತಳ್ಳಿದೆ. ಈ ಮಧ್ಯೆ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸರ್ಕಾರ ಲಾಕ್‌ಡೌನ್ ಹೇರಿಕೆ ಮಾಡಿದೆ. ಲಾಕ್‌ಡೌನ್ ಮೂಲಕ ಲಕ್ಷಾಂತರ ಮಂದಿ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಂದಿ ಉದ್ಯೋಗ ಕಳೆದುಕೊಂಡು ವಾಪಸ್ ತಮ್ಮ ಊರುಗಳಿಗೆ ತೆರಳಿದ್ದಾರೆ.
ಕೆಲಸ ಕಳೆದುಕೊಂಡ ಅದೆಷ್ಟೂ ಮಂದಿಗೆ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಆಪದ್ಬಾಂಧವನಾಗಿ ಪರಿಣಮಿಸಿದೆ. 300 ರೂ. ದಿನದ ಕೂಲಿ ಸಿಗುವ ಮೂಲಕ ಲಕ್ಷಾಂತರ ಮಂದಿಯ ಬದುಕಿಗೆ ಈ ಯೋಜನೆ ಆಸರೆಯಾಗಿದೆ.
ಏಪ್ರಿಲ್ ಮಧ್ಯದಿಂದ ಈಚೆಗೆ ನರೇಗಾದಡಿ ಸುಮಾರು 9-10 ಲಕ್ಷ ಮಂದಿ ನಿತ್ಯ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಮುನ್ನ ನರೇಗಾ ಯೋಜನೆಯಡಿ ಪ್ರತಿ ದಿನ ಸುಮಾರು 6 ಲಕ್ಷ ಮಂದಿ ಕೆಲಸ ಮಾಡುತ್ತಿದ್ದರು.
ಅದರಲ್ಲೂ ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಕೊಪ್ಪಳದಲ್ಲಿ ನರೇಗಾದಡಿ ಹೆಚ್ಚಿನ ಮಂದಿ ಕೆಲಸಕ್ಕೆ ಬರುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಬಹುತೇಕರು ಹಳ್ಳಿಗಳಿಗೆ ವಲಸೆ ಹೋಗಿದ್ದು, ಕೆಲಸ ಕಳಕೊಂಡವರು ಈ ಬಾರಿ ನರೇಗಾದಡಿ ಕೆಲಸ ಅರಸುತ್ತಿದ್ದಾರೆ.
2021-22 ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈವರಗೆ ಒಟ್ಟು 2.31 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಒಟ್ಟು 21.26 ಲಕ್ಷ ಮಂದಿ ಈ ಯೋಜನೆಯಡಿ ಕೆಲಸ ಮಾಡಿದ್ದಾರೆ.
ವಿಳಂಬ ಪಾವತಿ :
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇದೀಗ ಅನುದಾನದ ಕೊರತೆಯನ್ಮು ಎದುರಿಸುತ್ತಿದೆ. ಇದರ ಜೊತೆಗೆ ದಿನದ ಕೂಲಿಯನ್ನು 30 ದಿನಗಳಿಂದ 90 ದಿನಗಳವರೆಗೆ ವಿಳಂಬವಾಗಿ ಪಾವತಿ ಮಾಡಲಾಗುತ್ತಿದೆ.
ಇದರಿಂದ ಸಂಕಷ್ಟದ ಸಮಯದಲ್ಲಿ ನರೇಗಾ ನೆಚ್ಚಿಕೊಂಡಿರುವ ಫಲಾನುಭವಿಗಳಿಗೆ ಸಂಕಟ ಎದುರಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನರೇಗಾ ಯೋಜನೆಯಡಿ ಸುಮಾರು 335 ಕೋಟಿ ರೂ. ಬರಬೇಕಿದೆ. ಕೇಂದ್ರ ಸರ್ಕಾರ 247 ಕೋಟಿ ರೂ.ಗೆ ಮಂಜೂರಾತಿ ನೀಡಿದ್ದು, ಆ ಪೈಕಿ 77.14 ಕೋಟಿ ರೂ. ಬಿಡುಗಡೆ ಮಾಡಿದೆ.
ಕೇಂದ್ರದಿಂದ ಸುಮಾರು 750 ಕೋಟಿ ರೂ. ಅನುದಾನ ಬರಬೇಕಿದೆ. ನರೇಗಾ ಯೋಜನೆಯಡಿ ಈವರೆಗೆ ಒಟ್ಟು ಆಗಿರುವ ವೆಚ್ಚ 800.39 ಕೋಟಿ ರೂ. ಈ ಪೈಕಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈವರೆಗೆ ದಿನಗೂಲಿ ವೆಚ್ಚ ಸುಮಾರು 608.88 ಕೋಟಿ ರೂ. ಆಗಿದೆ.
ಅನುದಾನದ ಕೊರತೆಯ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಬಹುತೇಕರಿಗೆ 300 ರೂ. ದಿನಗೂಲಿ ನೀಡಲು ಸಾಧ್ಯವಾಗುತ್ತಿಲ್ಲ. ಈವರೆಗೆ 31.28 ಕೋಟಿ ರೂ. ದಿನಗೂಲಿ ಪಾವತಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 1.07 ಕೋಟಿ ರೂ. ಮೊತ್ತವನ್ನು ವಿಳಂಬವಾಗಿ ಪಾವತಿಸಲಾಗಿದೆ. ಸಾಮಾನ್ಯವಾಗಿ 15 ದಿನದೊಳಗೆ ದಿನಗೂಲಿಯನ್ನು ಪಾವತಿಸಬೇಕು. ಆದರೆ, ಸದ್ಯ 30-90 ದಿನಗಳ ವರೆಗೆ ವಿಳಂಬವಾಗಿ ದಿನಗೂಲಿ ಪಾವತಿಸಲಾಗುತ್ತಿದೆ. ಈವರಗೆ ಸುಮಾರು 565.34 ಕೋಟಿ ರೂ. ದಿನಗೂಲಿ ಪಾವತಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಂಕಿಅಂಶ ನೀಡಿದೆ.
ಕಾಮಗಾರಿಯ ವಸ್ತುಸ್ಥಿತಿ ಹೇಗಿದೆ?:
2021-22ನೇ ಸಾಲಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈವರೆಗೆ 30 ಜಿಲ್ಲೆಗಳಲ್ಲಿ 1,13,569 ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಪೈಕಿ ಈವರೆಗೆ 582 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 7,458 ಕಾಮಗಾರಿ ಪ್ರಾರಂಭಿಸಲಾಗಿದ್ದು, ಈವರೆಗೆ 5 ಕಾಮಗಾರಿ ಪೂರ್ಣಗೊಂಡಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 8,339 ಕಾಮಗಾರಿ ಪ್ರಾರಂಭಿಸಲಾಗಿದ್ದು, 25 ಕಾಮಗಾರಿಗಳು ಪೂರ್ಣಗೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿ 10,935 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಈವರೆಗೆ 134 ಕಾಮಗಾರಿ ಪೂರ್ಣಗೊಂಡಿದೆ.
ಚಾಮರಾಜನಗರ ಜಿಲ್ಲೆಯಲ್ಲಿ 8,739 ಕಾಮಗಾರಿ ಆರಂಭಿಸಲಾಗಿದ್ದು, ಈ ಪೈಕಿ 53 ಕಾಮಗಾರಿ ಪೂರ್ಣಗೊಂಡಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2788 ಕಾಮಗಾರಿ ಆರಂಭಿಸಲಾಗಿದ್ದು, 97 ಕಾಮಗಾರಿ ಪೂರ್ಣವಾಗಿವೆ.
ಬೆಂಗಳೂರು, ದ.ಕನ್ನಡ, ಬೀದರ್, ಉತ್ತರ ಕನ್ನಡ, ಉಡುಪಿ, ಯಾದಗಿರಿ, ಗದಗ, ಕೊಡಗಿನಲ್ಲಿ ನರೇಗಾದಡಿ ಯಾವುದೇ ಕಾಮಗಾರಿಗಳು ಪೂರ್ಣವಾಗಿಲ್ಲ ಎಂದು ಇಲಾಖೆ ಅಂಕಿಅಂಶ ನೀಡಿದೆ.