ಬೆಂಗಳೂರು:ಬಿಡದಿ ಬಳಿಯ ಟೊಯೊಟಾ ಕಿರ್ಲೋಸ್ಕರ್ ಕೈಗಾರಿಕೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟನ್ನು ಮುಖ್ಯಮಂತ್ರಿಯವರೊಂದಿಗೆ ಮತ್ತೊಮ್ಮೆ ಚರ್ಚೆ ಮಾಡಿ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಹೆಬ್ಬಾರ್, ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಕಾರ್ಮಿಕರ ಧರಣಿ 85ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕ ಇಲಾಖೆಯು ಸಭೆ ನಡೆಸಿದೆ. ಸಭೆಗೆ ಕಾರ್ಮಿಕ ಸಂಘಟನೆಯ ಅಧ್ಯಕ್ಷರು ಬರುತ್ತಿಲ್ಲ. 64 ಮಂದಿ ಕಾರ್ಮಿಕರ ವಿರುದ್ಧ ವಿಚಾರಣೆ ನಡೆಯುತ್ತಿದೆ. 1896 ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ. ಇದರ ಜೊತೆಗೆ ಹೊಸದಾಗಿ 181 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರ ಕಾರ್ಮಿಕರ ಪರವಾಗಿದೆ. ವಿಚಾರಣೆ ಎದುರಿಸುತ್ತಿರುವ 64 ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆಯಿಂದಾಗಿ ಬಿಕ್ಕಟ್ಟು ಮುಂದುವರೆದಿದೆ. ಸರ್ಕಾರ ಈ ವಿಚಾರದಲ್ಲಿ ಪ್ರತಿಷ್ಠೆ ಮಾಡುವುದಿಲ್ಲ. ಕಾರ್ಖಾನೆ ಮತ್ತು ಕಾರ್ಮಿಕರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಲಿದೆ. ನಾಳೆಯೇ ಟೊಯೊಟಾ ಕಾರ್ಖಾನೆಗೆ ಭೇಟಿ ಕೊಡಲಾಗುವುದು. ಕಾರ್ಮಿಕರು ಕಾರ್ಖಾನೆಯನ್ನು ಬಂದ್ ಮಾಡುವುದು ಸರಿಯಲ್ಲ. ಹಠ ಬಿಡಬೇಕು ಎಂದರು.