ಬೆಂಗಳೂರು :ವಿಪತ್ತಿನ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ವೃಂದ, ಪೊಲೀಸರು ಹಾಗೂ ಪೌರಕಾರ್ಮಿಕರನ್ನು ಸರ್ಕಾರ ಪ್ರೋತ್ಸಾಹ ಧನ ಘೋಷಿಸಿ ಪ್ರೋತ್ಸಾಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಕರೆಗೆ ಬೆಂಬಲ ವ್ಯಕ್ತಪಡಿಸಿದ ಹೆಚ್.ಡಿ. ಕುಮಾರಸ್ವಾಮಿ - Kumaraswamy supports PM Narendra Modi
ಕೊರೊನಾ ವೈರಸ್ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರನ್ನು ಚಪ್ಪಾಳೆ ಮೂಲಕ ಗೌರವಿಸಬೇಕೆಂಬ ಮೋದಿ ಕರೆಗೆ ಬೆಂಬಲಿಸುತ್ತಾ ನನ್ನದೊಂದು ಕೋರಿಕೆ. ವಿಪತ್ತಿನ ವಿರುದ್ಧ ಹೋರಾಡುತ್ತಿರುವ ಈ ವರ್ಗಕ್ಕೆ ಸರ್ಕಾರ Incentive (ಪ್ರೋತ್ಸಾಹ ಧನ) ಘೋಷಿಸಿ ಅವರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಮಯ, ಕುಟುಂಬ, ಆರೋಗ್ಯ ಲೆಕ್ಕಿಸದೆ ಧೈರ್ಯದಿಂದ ಹೋರಾಡುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರ ಪರಿಶ್ರಮವನ್ನು ಗೌರವಿಸಬೇಕು. ಪ್ರೋತ್ಸಾಹ ಧನದ ಮೂಲಕ ನೈತಿಕ, ಆರ್ಥಿಕ ಬೆಂಬಲ ನೀಡಬೇಕು. ಇಷ್ಟೇ ಅಲ್ಲ, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ 'ಗೌರವ ಪತ್ರ' ನೀಡಿ ಅವರ ಹೋರಾಟವನ್ನು ಅಜರಾಮರಗೊಳಿಸಬೇಕು ಎಂದು ಹೇಳಿದ್ದಾರೆ.
ಕಳೆದ ಫೆಬ್ರವರಿಯಿಂದಲೇ ವೈದ್ಯಕೀಯ ತಂಡಗಳು, ಪೊಲೀಸರು ಹಾಗೂ ಪೌರಕಾರ್ಮಿಕರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಫೆಬ್ರವರಿಯಿಂದ ಆರಂಭಿಸಿ, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುವವರೆಗೆ ಪ್ರತಿ ತಿಂಗಳು ಇವರೆಲ್ಲರಿಗೂ ಪ್ರೋತ್ಸಾಹ ಧನ ನೀಡಬೇಕು. ಅವರ ಧೈರ್ಯ, ತ್ಯಾಗಕ್ಕೆ ಸರ್ಕಾರ ಮನ್ನಣೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.