ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ನಮ್ಮ ಬೇಡಿಕೆ ಈಡೇರದ ಹೊರತು ಮಠಕ್ಕೆ ಮರಳಲ್ಲ ಎಂದು ಕೂಡಲಸಂಗಮದ ಬಸವಜಯ ಮೃಂತ್ಯುಂಜಯ ಶ್ರೀಗಳು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗಿದ್ದು, ಇಂದು ಪಾದಯಾತ್ರೆ ಸಮಾರೋಪ ಸಮಾರಂಭ ನಡೆಸುತ್ತಿದೆ. ಸಮಾರಂಭದ ನಂತರ ವಿಧಾನಸೌಧದ ಮುಂದೆ ಧರಣಿ ನಡೆಸಲಿದ್ದೇವೆ. ನಂತರ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ, ಬೇಡಿಕೆ ಈಡೇರದ ಹೊರತು ಮಠಕ್ಕೆ ಮರಳಲ್ಲ ಎಂದು ಕೂಡಲ ಸಂಗಮದ ಬಸವಜಯ ಮೃಂತ್ಯುಂಜಯ ಶ್ರೀಗಳು ಗುಡುಗಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮುದಾಯದ ಬೃಹತ್ ಶಕ್ತಿ ಪ್ರದರ್ಶನ ನಡೆಯಿತು. ಸಮುದಾಯದ ಶ್ರೀಗಳು, ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಜನಸಾಗರವೇ ನರೆದಿತ್ತು. ಸಮಾಜದ ಹಕ್ಕೊತ್ತಾಯದ ನುಡಿಗಳನ್ನಾಡಿದ ಬಸವಜಯ ಮೃತ್ಯುಂಜಯ ಶ್ರೀಗಳು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಸಂಕ್ರಾಂತಿಯಂದು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿ ಇಂದು ಬೆಂಗಳೂರು ತಲುಪಿ ಅರಮನೆಯ ಮೈದಾನದಲ್ಲಿ ಮಹಾ ರ್ಯಾಲಿ ಮಾಡಿ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಇದುವರೆಗೆ ಹಲವಾರು ಸಮುದಾಯದವರು ಇಲ್ಲಿ ಸಮಾವೇಶ ಮಾಡಿ ಹವಾ ಮಾಡಿರಬಹುದು. ಆದರೆ ಇಂದು ನಾವು ಕೂಡ ಕರೆ ಕೊಟ್ಟರೆ ನಮ್ಮ ಹವಾ ಏನು ಎನ್ನುವುದನ್ನು ತೋರಿಸಬಹುದು ಎಂದು ಇಂದು ಸಾಬೀತು ಮಾಡಿದ್ದೇವೆ ಎಂದರು.
ಸಮಾಜದ ಋಣ ತೀರಿಸಲು ಚಳವಳಿ ಆರಂಭ:
ನನಗೆ ನಮ್ಮ ತಂದೆ, ತಾಯಿ ಋಣ ತೀರಿಸಲು ಸಾಧ್ಯವಾಗಲಿಲ್ಲ, ಅವರ ನಿರೀಕ್ಷೆಯಂತೆ ಓದಿ ಮುಂದುಬರಲು ಆಗಲಿಲ್ಲ. ಬಾಲ್ಯದಲ್ಲೇ ನಾವು ಮಠ ಸೇರಿದೆವು. ಆದರೆ ಇಂದು ಪಾದಯಾತ್ರೆ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಿದ್ದೇವೆ. ಸಮಾಜವೇ ತಂದೆ-ತಾಯಿ ಆಗಿದೆ. ಈ ಮೂಲಕ ನಾನು ಸಮಾಜದ ಋಣ ತೀರಿಸುತ್ತಿದ್ದೇನೆ. ನಮ್ಮ ಪದಾಯಾತ್ರೆ ಪ್ರಮಾಣಿಕ, ನ್ಯಾಯಯುತವಾಗಿದೆ. ಪಾದಯಾತ್ರೆಯಲ್ಲಿ ಯಾರಿಗೂ ಯಾವುದೇ ತೊಂದರೆ ಆಗದಂತೆ ನಡೆದಿದೆ. ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿ ಪಾದಯಾತ್ರೆ ಮಾಡಲಿಲ್ಲ, ಸಾಮಾಜಿಕ ನ್ಯಾಯಕ್ಕಾಗಿ ಮಾಡಿದ ಪಾದಯಾತ್ರೆ. 708 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದೇವೆ ಎಂದರು.