ಬೆಂಗಳೂರು:ಆಟೋ ಡ್ರೈವರ್ ಗಳಿಬ್ಬರ ಜಗಳದ ವೇಳೆ ಓರ್ವ ಮತ್ತೋರ್ವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಡಿತಗೊಳಿಸಿ, 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಟೋ ಚಾಲಕ ದೀನದಯಾಳ್ ಅಲಿಯಾಸ್ ದೀನ ಅಲಿಯಾಸ್ ಸ್ವಾಮಿ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಆಟೋಗೆ ಹಾನಿಯಾಗಿದೆ ಎಂಬ ಕಾರಣಕ್ಕೆ ಇಬ್ಬರು ಚಾಲಕರ ನಡುವೆ ಜಗಳ ನಡೆದಿದೆ. ಹಠಾತ್ ಪ್ರಚೋದನೆಗೆ ಒಳಗಾಗಿ ಆರೋಪಿ ದೀನದಯಾಳ್ ಸ್ವಯಂ ನಿಯಂತ್ರಣ ಕಳೆದುಕೊಂಡು ಉದ್ವೇಗದಲ್ಲಿ ಚಾಲಕ ಕೇಶವ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸುಟ್ಟಗಾಯಗಳ ಪರಿಣಾಮ ಕೇಶವ್ 29 ದಿನಗಳ ಬಳಿಕ ಸಾವನ್ನಪ್ಪಿದ್ದಾರೆ. ಆರೋಪಿ ದೀನದಯಾಳ್ ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ.
ಅಪರಾಧಿಕ ನರಹತ್ಯೆ:ಹೀಗಾಗಿ, ಕೇಶವ್ ಸಾವನ್ನು ಐಪಿಸಿ ಸೆಕ್ಷನ್ 302ರ ಅಡಿ ಕೊಲೆ ಎಂದು ಪರಿಗಣಿಸಲಾಗದು. ಬದಲಿಗೆ ಐಪಿಸಿ ಸೆಕ್ಷನ್ 304ರ ಅಡಿ ಅಪರಾಧಿಕ ನರಹತ್ಯೆ ಎಂದು ಪರಿಗಣಿಸಬೇಕಿದೆ. ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿ ದೀನದಯಾಳ್ ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದೆ. ಅದರಂತೆ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಮೃತ ಕೇಶವ್ ತಂದೆ - ತಾಯಿಗೆ ನೀಡುವಂತೆ ನಿರ್ದೇಶಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಹೈಕೋರ್ಟ್ ಆದೇಶಿಸಿದೆ.