ಕರ್ನಾಟಕ

karnataka

ETV Bharat / city

ಸಾರಿಗೆ ನೌಕರರ ಮುಷ್ಕರ ಈ ಹಂತದಲ್ಲಿ ಸಮಂಜಸವಲ್ಲ, ಕೂಡಲೇ ಸೇವೆ ಆರಂಭಿಸಿ: ಹೈಕೋರ್ಟ್

ಹೈಕೋರ್ಟ್
ಹೈಕೋರ್ಟ್

By

Published : Apr 20, 2021, 4:02 PM IST

Updated : Apr 20, 2021, 5:46 PM IST

15:59 April 20

ಹೈಕೋರ್ಟ್ ನೋಟಿಸ್

ಬೆಂಗಳೂರು: ಕೋವಿಡ್ ಸೋಂಕು ಆವರಿಸುತ್ತಿರುವ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೂಡಲೇ ಸೇವೆ ಆರಂಭಿಸುವಂತೆ ಸೂಚಿಸಿದೆ.


ಸಾರಿಗೆ ನೌಕರರ ಮುಷ್ಕರದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಕುರಿತು ಸಲ್ಲಿಕೆಯಾಗಿರುವ ನಾಲ್ಕು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಕೆಎಸ್ಆರ್​​ಟಿಸಿ, ಬಿಎಂಟಿಸಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಏ.22ರ ಬೆಳಗ್ಗೆ 11.40ಕ್ಕೆ ಮುಂದೂಡಿತು.


ಇದಕ್ಕೂ ಮನ್ನ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ಸಾರಿಗೆ ನೌಕರರ ಬೇಡಿಕೆಗಳಲ್ಲಿ ಹಲವನ್ನು ಈಡೇರಿಸಲಾಗಿದೆ. ಆದರೆ, ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ. ಮುಷ್ಕರವನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದ್ದು, ಈ ಸಂಬಂಧ ಕಾರ್ಮಿಕ ನ್ಯಾಯಾಲಯದಲ್ಲಿಯೂ ದಾವೆ ಹೂಡಲಾಗಿದೆ. ಹಾಗೆಯೇ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೇ, ಸಾರಿಗೆ ನೌಕರರಲ್ಲಿ ಕೆಲವರಾದರೂ ಸೇವೆಗೆ ಹಾಜರಾಗುತ್ತಿದ್ದು, ಪರಿಸ್ಥಿತಿ ಹಿಂದಿಗಿಂತ ಉತ್ತಮವಾಗಿದೆ ಎಂದರು.


ವಾದ ಆಲಿಸಿದ ಪೀಠ, ಸಾರಿಗೆ ನೌಕರರ ಮುಷ್ಕರದ ಕುರಿತು ಬೇಸರ ವ್ಯಕ್ತಪಡಿಸಿತು. ಸಾರಿಗೆ ನೌಕರರ ಮುಷ್ಕರ ಸರಿಯೋ ತಪ್ಪೋ ಅದು ಎರಡನೇ ವಿಚಾರ. ಆದರೆ, ಮೊದಲಿಗೆ ಸಾರಿಗೆ ಸೇವೆ ಜನರಿಗೆ ಲಭ್ಯವಾಗಬೇಕು. ರಾಜ್ಯದಲ್ಲಿ ಕೊರೊನಾ ಶೀಘ್ರವಾಗಿ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಕೆಲಸಕ್ಕೆ ತೆರಳಲು, ಸೋಂಕು ಪರೀಕ್ಷೆಗೆ, ಚಿಕಿತ್ಸೆಗೆ ತೆರಳಲು ಸಾರಿಗೆ ಸೇವೆ ಅತ್ಯಗತ್ಯ. ಹೀಗಾಗಿ ಪ್ರಸಕ್ತ ಸಂದರ್ಭ ಮುಷ್ಕರ ಹೂಡುವುದು, ಸಂವಿಧಾನದ ವಿಧಿ 21ರ ಅಡಿ ಜನಸಾಮಾನ್ಯರಿಗೆ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಪೀಠ ಅಭಿಪ್ರಾಯಪಟ್ಟಿತು.


ಅಲ್ಲದೇ, ನೌಕರರ ಬೇಡಿಕೆಗಳು ಕಾನೂನುಬದ್ಧವಾಗಿಯೇ ಇರಬಹುದು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಸಾರಿಗೆ ಸೇವೆ ತುರ್ತು ಅಗತ್ಯವಾಗಿದ್ದು, ಕೂಡಲೇ ಕಾರ್ಯಾರಂಭ ಮಾಡುವುದು ಸೂಕ್ತ ಎಂದಿತು. ಜೊತೆಗೆ, ಸಾರಿಗೆ ನೌಕರರು ತಮ್ಮ ಬೇಡಿಕೆಯನ್ನು ಹಿಂಪಡೆಯದೆಯೂ ಮುಷ್ಕರ ಕೈಬಿಟ್ಟು ಜನಸಾಮಾನ್ಯರಿಗೆ ಸೇವೆ ನೀಡಲು ಮುಂದಾಗುತ್ತಾರೆ ಎಂದು ನ್ಯಾಯಾಲಯಕ್ಕೆ ಈಗಲೂ ಭರವಸೆ ಇದೆ ಎಂದು ಅಭಿಪ್ರಾಯಪಟ್ಟು ವಿಚಾರಣೆ ಮುಂದೂಡಿತು.

Last Updated : Apr 20, 2021, 5:46 PM IST

ABOUT THE AUTHOR

...view details