ಕರ್ನಾಟಕ

karnataka

ETV Bharat / city

ನಿಮ್ಮ ಮನೆ ಸಮೀಪಕ್ಕೆ ಬರಲಿದೆ ಮೊಬೈಲ್​ ಫೀವರ್ ಕ್ಲಿನಿಕ್​: ಇದು ಕೆಎಸ್​ಆರ್​ಟಿಸಿ ಅವತಾರ

ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುತ್ತಿದ್ದ ಕೆಎಸ್ಆರ್‌ಟಿಸಿ ಇದೀಗ ಆರೋಗ್ಯ ತುರ್ತುಸ್ಥಿತಿಯಲ್ಲಿ ಆರೋಗ್ಯ ಸೇವೆಗೂ ಅರ್ಪಿಸಿಕೊಳ್ಳುವ ಮೂಲಕ ಮತ್ತೊಂದು ರೀತಿಯ ಸೇವೆ ಒದಗಿಸುತ್ತಿದೆ.

mobile fever clinics
ಮೊಬೈಲ್​ ಫೀವರ್ ಕ್ಲಿನಿಕ್​

By

Published : May 13, 2020, 12:08 AM IST

ಬೆಂಗಳೂರು: ಕ್ಲಿನಿಕ್ ಆನ್ ವ್ಹೀಲ್ ಎನ್ನುವ ಹೊಸ ಪರಿಕಲ್ಪನೆಯೊಂದಿಗೆ ಕೆಎಸ್ಆರ್‌ಟಿಸಿ ಆರೋಗ್ಯ ಇಲಾಖೆಯ ವೈದ್ಯಕೀಯ ಸೇವೆಗೆ ಸಾಥ್​ ನೀಡಿದ್ದು,ಕೊರೊನಾ ತುರ್ತು ಸ್ಥಿತಿಯಲ್ಲಿಯೂ ತನ್ನ ಸೇವೆಯನ್ನು ಹೊಸ ರೀತಿಯಲ್ಲಿ ಸಲ್ಲಿಸುತ್ತಿದೆ.

ಹೌದು, ರಾಜ್ಯದ ರಸ್ತೆ ಸಾರಿಗೆಯ ಜೀವನಾಡಿಯಾಗಿರುವ ಕೆಎಸ್ಆರ್‌ಟಿಸಿ ಬಸ್​​ಗಳನ್ನು ಇದೀಗ ಕೊರೊನಾ ತುರ್ತು ಸ್ಥಿತಿಯಲ್ಲಿ ಸಂಚಾರಿ ಮೊಬೈಲ್ ಕ್ಲಿನಿಕ್​ಗಳಾಗಿ ಬಳಸಿಕೊಳ್ಳುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ರೈಲುಗಳು ಐಸೋಲೇಷನ್ ವಾರ್ಡ್​ಗಳಾದರೆ ಬಸ್​​ಗಳು ಮೊಬೈಲ್ ಕ್ಲಿನಿಕ್​ಗಳಾಗಿ ಜನ ಸೇವೆಯಲ್ಲಿ ತೊಡಗಿವೆ.

ಮೊಬೈಲ್​ ಫೀವರ್ ಕ್ಲಿನಿಕ್​

ಸಾಮಾನ್ಯ ಆರೋಗ್ಯ ತಪಾಸಣೆ ಹಾಗು ಕೋವಿಡ್ ಪರೀಕ್ಷೆಗೆ ಅನುವಾಗಲು ಸಂಚಾರಿ ಮೊಬೈಲ್ ಕ್ಲಿನಿಕ್​ಗಳು ಇದೀಗ ಸಿಲಿಕಾನ್ ಸಿಟಿಯ ರಸ್ತೆಗಿಳಿದಿವೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಒದಗಿಸುವ ಜೊತೆಗೆ ಸೀಲ್ ಡೌನ್ ಪ್ರದೇಶದಲ್ಲಿ ಸಾಮೂಹಿಕ ಕೊರೊನಾ ತಪಾಸಣೆಗೆ ಪೂರಕವಾಗಿ ಸೇವೆ ಸಲ್ಲಿಸಿವೆ.

ಮನೆ ಬಾಗಿಲಿಗೆ ಬರಲಿದೆ ಈ ಮೊಬೈಲ್​​ ಕ್ಲಿನಿಕ್

ಈ ಸಂಚಾರಿ‌ ಚಿಕಿತ್ಸಾಲಯ ನಿಮ್ಮ ಮನೆಯ ಸಮೀಪಕ್ಕೆ ಬರಲಿದೆ. ಮನೆಯಲ್ಲಿ‌ ಇರುವವರ ಆರೋಗ್ಯ ತಪಾಸಣೆ ನಡೆಸಲಿದೆ. ಅಗತ್ಯ ಔಷಧೋಪಚಾರ ಒದಗಿಸಲಿದೆ. ಸಾಕಷ್ಟು ದಿನದಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಆಸ್ಪತ್ರೆಗೆ ತೆರಳಲು ಸಾಧ್ಯವಾಗದೇ ಇದ್ದವರಿಗೆ ಅಗತ್ಯ ವೈದ್ಯಕೀಯ ನೆರವನ್ನು ಫೀವರ್ ಕ್ಲಿನಿಕ್ ಒದಗಿಸಲಿದೆ.

ಮೊಬೈಲ್ ಫೀವರ್ ಕ್ಲಿನಿಕ್ ಬಸ್ಸುಗಳ‌ ಪ್ರಾಯೋಜಕತ್ವ

ಹೌಸ್‌ಜಾಯ್‌ನ ಸ್ಥಾಪಕ ಮತ್ತು ಸಿಇಒ ಸಂಚಿತ್ ಗೌರವ್, ಕೆಎಸ್‌ಆರ್‌ಟಿಸಿ, ಸಂಸದ ತೇಜಸ್ವಿ ಸೂರ್ಯ, ಎಸಿಟಿ ಕೋವಿಡ್ ಫಂಡ್ ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ ಬೆಂಗಳೂರಿನಾದ್ಯಂತ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ವೈರಸ್ ವಿರುದ್ಧದ ಹೋರಾಟ ಮಾಡಿ‌ ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ.

ಪೋರ್ಟಿಯಾ ಮೆಡಿಕಲ್, ಎಸ್‌ಆರ್‌ಎಲ್ ಡಯಾಗ್ನೋಸ್ಟಿಕ್ಸ್, ಬಯೋಗ್ನೋಸಿಸ್ ಟೆಕ್ನಾಲಜೀಸ್, ಅಪ್ನಾ ಕಾಂಪ್ಲೆಕ್ಸ್, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ತಂಡವು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಕೋವಿಡ್ ಪರೀಕ್ಷೆಗಾಗಿ ಮೊಬೈಲ್ ಆರೋಗ್ಯ ತಪಾಸಣೆ ಚಿಕಿತ್ಸಾಲಯಗಳಾಗಿ ಮಾರ್ಪಡಿಸಿದೆ. ಬಸ್ಸಿನಲ್ಲಿ ಹಾಸಿಗೆಗಳು, ಸಮಾಲೋಚನಾ ಕೊಠಡಿ, ಸರಿಯಾದ ನೈರ್ಮಲ್ಯ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳುವ 2 ವಲಯಗಳಾಗಿ ವಿಂಗಡಿಸಲಾಗಿದೆ.

ಬೆಂಗಳೂರಿನಾದ್ಯಂತ 4 ಮೊಬೈಲ್ ಬಸ್ ಚಿಕಿತ್ಸಾಲಯಗಳೊಂದಿಗೆ 4 ತಂಡಗಳು ಇರಲಿವೆ. ಪ್ರತಿ ತಂಡವು 1 ವೈದ್ಯರು, 3 ದಾದಿಯರು ಮತ್ತು 1 ಲ್ಯಾಬ್ ತಂತ್ರಜ್ಞರನ್ನು ಒಳಗೊಂಡಿರುತ್ತದೆ ಮತ್ತು ಹಲವಾರು ಸ್ವಯಂಸೇವಕರು ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೈ ಜೋಡಿಸಲಿದ್ದಾರೆ‌.

ಮೊದಲು ಈ ತಂಡವು ಕೆಂಪು ವಲಯಗಳಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಈ ವಲಯಗಳಿಂದ ಗರಿಷ್ಠ ಸಂಖ್ಯೆಯ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿ, ರೋಗಲಕ್ಷಣಗಳ ಪರೀಕ್ಷೆ ನಡೆಸಲಿದೆ ಒಂದು ವೇಳೆ ಪಾಸಿಟಿವ್ ಇರುವ ಲಕ್ಷಣ ಕಂಡುಬಂದರೆ ಅವರನ್ನು ಪ್ರತ್ಯೇಕಿಸುತ್ತದೆ.

ಸಂಚಾರಿ ಕ್ಲಿನಿಕ್​​ ಚಿಕಿತ್ಸೆ ಪಡೆಯುವುದು ಹೇಗೆ..?

ಆರೋಗ್ಯ ಸಮಸ್ಯೆ ಇರುವವರು ಹೌಸ್ ಜಾಯ್ ಕೇರ್ ಡಾಟ್ ಇನ್ ವೆಬ್​ನಲ್ಲಿ ನೋಂದಣಿ ಮಾಡಬೇಕು. ಮೊಬೈಲ್ ಕ್ಲಿನಿಕ್ ಬಸ್​​ನ ಲೊಕೇಷನ್ ಅನ್ನು ನೋಂದಾಯಿಸಿದವರಿಗೆ ಕಳಿಸಿಕೊಡಲಾಗುತ್ತದೆ. ಅಲ್ಲಿಗೆ ತೆರಳಿ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅದರಲ್ಲಿ ಜ್ವರ, ತಲೆನೋವು, ಗಂಟಲು ನೋವು ಸೇರಿ ಕೊರೊನಾ ಲಕ್ಷಣಗಳು ಇರುತ್ತವೆಯೋ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಿದ್ದೇವೆ. ಮೊಬೈಲ್ ಫೀವರ್ ಕಿಯೋಸ್ಕ್​​ನಿಂದ ಗಂಟಲು‌ ದ್ರವದ ಸ್ಯಾಂಪಲ್​ ಸಂಗ್ರಹ ಮಾಡಿ ಲ್ಯಾಬ್​ಗೆ ಕಳಿಸಲಿದ್ದೇವೆ. ಕೊರೊನಾ‌ ಕುರಿತು ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಮಾಡುತ್ತೇವೆ ಕೊರೊನಾ ಪಾಸಿಟಿವ್ ಬಂದಲ್ಲಿ ಅವರನ್ನು ಬಗ್ಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ಮಾಹಿತಿ ನೀಡಲಿದ್ದೇವೆ ಡಾ.ಪ್ರಮುಖ್ ಈಟಿವಿ ಭಾರತ್​​ಗೆ ವಿವರಿಸಿದ್ದಾರೆ.

ಪರೀಕ್ಷಾ ಪ್ರಕ್ರಿಯೆ ಅಂಶಗಳು :

  • ಎಲ್ಲಾ ನಿವಾಸಿಗಳಿಗೆ ಉಚಿತ ಗ್ಲೂಕೋಸ್, ರಕ್ತದೊತ್ತಡ ಪರೀಕ್ಷೆ ಮತ್ತು ಕೋವಿಡ್ ರೋಗಲಕ್ಷಣಗಳ ಸಮಾಲೋಚನೆ
  • ರೋಗಲಕ್ಷಣಗಳಿದ್ದರೆ ಬಯೋಗ್ನೋಸಿಸ್ ಟೆಕ್ನಾಲಜೀಸ್​​ನಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹ
  • ಸೋಂಕು ಕಂಡುಬಂದಲ್ಲಿ ಅವರ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ.
  • ಎಸ್‌ಆರ್‌ಎಲ್ ಲ್ಯಾಬ್‌ಗಳೊಂದಿಗೆ ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತದೆ

ಈಗಾಗಲೇ ಕೆಎಸ್ಆರ್​ಟಿಸಿಯು ಮೊಬೈಲ್ ಫೀವರ್ ಕ್ಲಿನಿಕ್​ಗಳನ್ನು ಮೈಸೂರು, ಮಂಡ್ಯ, ಮಂಗಳೂರು, ‌ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ,‌ ತುಮಕೂರು, ರಾಯಚೂರುಗಳಲ್ಲಿ ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಪ್ರಾರಂಭ ಮಾಡಿದೆ. ಕೆ‌ಎಸ್ಆರ್​ಟಿಸಿ‌ಯ ಹಳೆಯ ಬಸ್ಸುಗಳನ್ನು ನಿಗಮದ‌ ಕಾರ್ಯಗಾರಗಳಲ್ಲಿಯೇ ಸಿಬ್ಬಂದಿಯಿಂದ ಮೊಬೈಲ್ ಫೀವರ್ ಕ್ಲಿನಿಕ್​ಗಳಾಗಿ ಮಾರ್ಪಾಡಿಸಲಾಗಿದೆ. ಬೆಂಗಳೂರಿನಲ್ಲಿಯೇ ಇನ್ನೂ ನಾಲ್ಕು ಇದೇ ಮಾದರಿಯ ಮೊಬೈಲ್ ಫೀವರ್ ಕ್ಲಿನಿಕ್​ ರೂಪಿಸಿ ಹೌಸ್ ಜಾಯ್ ಅವರಿಗೆ ನೀಡಲಾಗುತ್ತಿದೆ.

ABOUT THE AUTHOR

...view details