ಬೆಂಗಳೂರು:ಕೊರೊನಾ ವೈರಸ್ ತಲ್ಲಣದಿಂದಾಗಿ ಜಗತ್ತೇ ಬೆಸ್ತು ಬಿದ್ದಿದ್ದು, ಪ್ರಕರಣಗಳು ಗಣನೀಯವಾಗಿ ಏರತೊಡಗುತ್ತಿವೆ. ಹೀಗಾಗಿ ಪರೀಕ್ಷೆ, ಕ್ರೀಡಾಕೂಟಗಳನ್ನು ಮುಂದೂಡಲಾಗುತ್ತಿದೆ. ಆಯಾ ಇಲಾಖೆಗಳ ಸಭೆ-ಸಮಾರಂಭಗಳನ್ನೂ ರದ್ದುಪಡಿಸಲಾಗುತ್ತಿದೆ. ಅದರ ಸಾಲಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿದ್ದ ಸಮಾರಂಭವೂ ಸೇರಿದೆ.
ಕೊರೊನಾ ವೈರಸ್ ಭೀತಿ: ಕೆಎಸ್‌ಸಿಎ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ
ಕೊರೊನಾ ವೈರಸ್ ಆತಂಕದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮಾ.22ರಂದು ಜರುಗಬೇಕಿದ್ದ ಕೆಎಸ್‌ಸಿಎ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ. ಅಲ್ಲದೆ, ಸೈಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿ ಜಯಿಸಿದ ಕರ್ನಾಟಕ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸಲಾಗುತ್ತಿತ್ತು. ಹಾಗೆಯೇ 2019ರಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಪ್ರಶಸ್ತಿ ವಿತರಿಸಲಾಗುತ್ತಿತ್ತು.
ಕೊರೊನಾ ವೈರಸ್ ಆತಂಕದಿಂದ ಮೇ 22 ರಂದು ಆಯೋಜಿಸಿದ್ದ ಸಮಾರಂಭವನ್ನು ಮುಂದೂಡಲು ಕೆಎಸ್‌ಸಿಎ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ವೈರಸ್ ಹತೋಟಿಗೆ ಬಂದ ಬಳಿಕ ನೂತನ ದಿನಾಂಕ ಪ್ರಕಟಿಸಲಾಗುವುದು ಎಂದು ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ್ ತಿಳಿಸಿದ್ದಾರೆ.