ಬೆಂಗಳೂರು: ಎಸ್ಡಿಪಿಐ ಮನಸ್ಥಿತಿ ಇನ್ನು ಬದಲಾಗಿಲ್ಲ. ಹಿಂದೂಗಳನ್ನ ಕೊಲೆ ಮಾಡುವ ಅವರ ಮನಸ್ಥಿತಿ ಮುಂದುವರೆದಿದೆ. ಕೇರಳ ಸೇರಿ ಹೊರಭಾಗದಿಂದ ಬಂದವರಿಂದ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಶಿವಮೊಗ್ಗ ಗಲಭೆ ಕುರಿತು ಮುಖ್ಯಮಂತ್ರಿಗಳಿಗೆ ಸಮಗ್ರ ಮಾಹಿತಿ ನೀಡಿದ್ದೇನೆ. ಆರೋಪಿಗಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಶಿವಮೊಗ್ಗ ಗಲಭೆ ಕುರಿತು ಚರ್ಚಿಸಿದರು. ಘಟನೆ ಬೆಳವಣಿಗೆಗಳ ಕುರಿತು ಸಿಎಂಗೆ ಸಮಗ್ರ ಮಾಹಿತಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಗ್ಗೆ ಸರ್ಕಾರಿ ಕಾರ್ಯಕ್ರಮ ಕೂಡ ಯಶಸ್ವಿಯಾಯಿತು. ಬಿಜೆಪಿಯ ಅಮೃತ ಮಹೋತ್ಸವ ಕಾರ್ಯಕ್ರಮ ಕೂಡ ಯಶಸ್ವಿಯಾಯಿತು. ಎಲ್ಲರೂ ಕೂಡ ಮನೆಗೆ ಹೋದೆವು. ಅಷ್ಟರೊಳಗೆ ಎಸ್ಡಿಪಿಐ ಕಾರ್ಯಕರ್ತರು ಸಾವರ್ಕರ್ ಫೋಟೋ ತೆಗೆದು ಹಾಕಿದರು. ಇದರಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಈ ಮಧ್ಯೆ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಹಾಗೂ ಶರವಣ ಎಂಬುವರು ಹೋಗುತ್ತಿರುವ ಸಂದರ್ಭದಲ್ಲಿ 6 ಜನ ಮತ್ತೊಂದು ಕೋಮಿನ ಗುಂಡಾಗಳು ಪ್ರೇಮ್ ಸಿಂಗ್ಗೆ ಚಾಕು ಹಾಕಿದ್ದಾರೆ. ಆತ ಬದುಕುಳಿಯೋದು ಕಷ್ಟ ಎನ್ನಲಾಗುತ್ತಿದೆ. ಪೊಲೀಸರು ಬಹಳ ಶ್ರಮಹಾಕಿ ಆರೋಪಿಗಳ ಹುಡುಕಾಡುವ ಸಂದರ್ಭದಲ್ಲಿ ಒಬ್ಬನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಅಲ್ಲದೇ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ಅಂಶಗಳನ್ನ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದರು.
ಮನಸ್ಥಿತಿ ಬದಲಾಗಿಲ್ಲ:ಹಿಂದೂಗಳನ್ನ ಕೊಲೆ ಮಾಡುವ ಎಸ್ಡಿಪಿಐ ಅವರ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದ, ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿ ಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಆಗಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಹಾಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದರು.
ಹಿಂದೂಗಳು ಎದ್ದರೆ ಅನ್ಯ ಕೋಮಿನ ಗೂಂಡಾಗಳು ಉಳಿಯಲ್ಲ: ಮುಸಲ್ಮಾನ ಹಿರಿಯರು ಶಾಂತಿ ಕಾಪಾಡಲು ಹಿಂದೆಲ್ಲಾ ಶ್ರಮಿಸಿದ್ದಾರೆ. ಈಗ ಮುಸಲ್ಮಾನ ಹಿರಿಯರು ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಬೇಕು. ಇಲ್ಲದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ. ಎಲ್ಲ ಮುಸ್ಲಿಮರ ಮೇಲೂ ನಾನು ಆರೋಪ ಮಾಡಲ್ಲ.
ಆದರೆ, ಹಿಂದೂಗಳು ಅಶಕ್ತರಲ್ಲ. ಅವರು ಎದ್ದರೆ ಮತ್ತೊಂದು ಕೋಮಿನ ಗೂಂಡಾಗಳು ಉಳಿಯಲ್ಲ. ಮತ್ತೊಂದು ಕೋಮಿನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಈ ಗಲಭೆ ಹಿಂದೆ ಕಾಂಗ್ರೆಸ್‌ನವರು ಇದ್ದಾರೆ. ಹಾಗಾಗಿ ಗಲಭೆಯನ್ನು ಕಾಂಗ್ರೆಸ್‌ನವರು ಘಟನೆಯನ್ನು ಖಂಡಿಸುತ್ತಿಲ್ಲ ಎಂದು ಆರೋಪಿಸಿದರು.