ಬೆಂಗಳೂರು:ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರುತ್ತಿದೆ. ಇವತ್ತು ಬಿಜೆಪಿಯಿಂದ ಬೈರತಿ ಬಸವರಾಜ್ ಮತ್ತು ಕಾಂಗ್ರೆಸ್ನಿಂದ ವೈ.ನಾರಾಯಣಸ್ವಾಮಿ ಹಾಗೂ ಜೆಡಿಎಸ್ನಿಂದ ಕೃಷ್ಣಮೂರ್ತಿ ಏಕಕಾಲದಲ್ಲಿ ನಾಮಪತ್ರ ಸಲ್ಲಿಸಿದರು.
ಕೃಷ್ಣರಾಜಪುರ ಉಪಸಮರ..ಏಕಕಾಲದಲ್ಲಿ ನಾಮಪತ್ರ ಸಲ್ಲಿಸಿದ 3 ಪಕ್ಷದ ಅಭ್ಯರ್ಥಿಗಳು.. ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ನಾಮಪತ್ರ ಸಲ್ಲಿಕೆಗೂ ಮುನ್ನ ಭಟ್ಟರಹಳ್ಳಿಯಲ್ಲಿರುವ ಭಕ್ತ ಆಂಜನೇಯ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಬಳಿಕ ಹೋಮ ಹವನ ನೆರವೇರಿಸಿದರು. ಬಳಿಕ ಬೈರತಿಯವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ನಡೆಸಿದರು. ಬೈರತಿ ಬಸವರಾಜ್ಗೆ ಸಚಿವ ವಿ.ಸೋಮಣ್ಣ, ಶಾಸಕ ಅರವಿಂದ ಲಿಂಬಾವಳಿ ಸಾಥ್ ನೀಡಿದರು.
ಈ ವೇಳೆ ಅರವಿಂದ ಲಿಂಬಾವಳಿ ಮಾತನಾಡಿ,ಇಂದು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕೆಆರ್‌ಪುರಂ ಅಷ್ಟೇ ಅಲ್ಲ. ಒಟ್ಟು 15 ಬೈ ಎಲೆಕ್ಷನ್ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ. ಅದು ಅನರ್ಹತೆಯಲ್ಲ. ರಾಜಕೀಯ ಧೃವೀಕರಣವಾಗಿದೆ. ಈ ಹಿಂದೆ ಧರಂಸಿಂಗ್ ಸರ್ಕಾರದ ವೇಳೆ ತಪ್ಪಾಗಿ ನಡೆದುಕೊಂಡಿದ್ದು ಯಾರು?ಯಡಿಯೂರಪ್ಪ ಜೊತೆ ಮೈತ್ರಿ ಸರ್ಕಾರದ ವೇಳೆ ಅಧಿಕಾರ ನೀಡದೇ ಇದ್ದದ್ದು ಕುಮಾರಸ್ವಾಮಿ. ಮೊನ್ನೆಯ ಮೈತ್ರಿ ಸರ್ಕಾರವನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿದ್ದರೇ ಹೀಗಾಗುತ್ತಿರಲಿಲ್ಲ. ಹೆಚ್ಡಿಕೆ ಆಡಳಿತದ ಬಗ್ಗೆ ಬೇಸತ್ತು ಅವರೆಲ್ಲಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮಾತನಾಡಿ, ನಾನು ಯಾವ ಪಕ್ಷದಲ್ಲಿ ಇರುತ್ತೇನೆಯೋ ಆ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ. ನನಗೆ ಕ್ಷೇತ್ರದ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಮಾತನಾಡಿ, ನೂರಕ್ಕೆ ನೂರು ಗೆಲ್ಲೋ ವಿಶ್ವಾಸವಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಜಾರ್ಜ್ ಬಂದಿದ್ದು ಮತ್ತಷ್ಟು ಬಲ ಬಂದಿದೆ. ಇದು ಸ್ವಾಭಿಮಾನದ ಪ್ರಶ್ನೆ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಜನ ಪಾಠ ಕಲಿಸ್ತಾರೆ. ಸುಪ್ರೀಂಕೋರ್ಟ್ ಕೂಡ ಅವರು ಅನರ್ಹರು ಅಂತಾ ಹೇಳಿದೆ. ಕೆಆರ್‌ಪುರಂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪಕ್ಷಾಂತರ ಮಾಡಿದವರನ್ನು ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಅಲ್ಲಿನ ಮತದಾರರು ಸೋಲಿಸಿದ್ದಾರೆ. ಇಲ್ಲಿಯೂ ಪಕ್ಷಾಂತರ ಮಾಡಿದ 15 ಮಂದಿ ಶಾಸಕರು ಸೋಲುವುದು ಖಚಿತ. 2013ರಲ್ಲಿ ಎ.ಕೃಷ್ಣಪ್ಪ ಅವರಿಗೆ ತಪ್ಪಿಸಿ ಬೈರತಿ ಬಸವರಾಜ್‌ನವರಿಗೆ ಟಿಕೆಟ್ ಕೊಡಿಸದೇ ಹೋಗಿದ್ದರೆ ಅವರು ಎಂದಿಗೂ ಶಾಸಕರಾಗುತ್ತಿರಲಿಲ್ಲ. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಗೆದ್ದು,ಇದೀಗ ಅಧಿಕಾರದಾಹಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಎಷ್ಟು ಸರಿ. ಇವರಿಗೆ ಮಾನ ಮಾರ್ಯಾದೆ ಇಲ್ಲ ಎಂದು ಕಿಡಿಕಾರಿದ್ರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ ಅವರು ಪಕ್ಷಾಂತರ ಕಾಯ್ದೆ ಉದ್ದೇಶವನ್ನೇ ಉಲ್ಲಂಘಿಸಿದ್ದಾರೆ. ಸುಪ್ರೀಂಕೋರ್ಟ್ ಶಾಸಕರನ್ನು ಅನರ್ಹರು ಎಂದು ತೀರ್ಪು ನೀಡಿರುವಾಗ ಜನತಾ ನ್ಯಾಯಾಲಯ ಸಹ ಅನರ್ಹರನ್ನ ಸೋಲಿಸಿ ಪಾಠ ಕಲಿಸಬೇಕು ಎಂದರು. ನಾನು ಟಿಪ್ಪು ಜಯಂತಿ ಆಚರಣೆ ಜಾರಿ ಮಾಡಿದ್ದೆ. ಮೂರು ವರ್ಷ ಆಚರಣೆ ಮಾಡಿಸಿದ್ದೆವು. ಆದರೆ, ಅದನ್ನು ಬಿಜೆಪಿವರು ಬ್ಯಾನ್ ಮಾಡಿದ್ದರು. ಈ ಹಿಂದೆ ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್ ಒಬ್ಬ ದೇಶ ಭಕ್ತ ಅಂತಾ ಟೋಪಿ ಹಾಕ್ಕೊಂಡಿದ್ರು. ಈಗ ಅದನ್ನ ನಿಲ್ಲಿಸಿದ್ದಾರೆ. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸ, ವಾಲ್ಮೀಕಿ, ಕ್ರಿಸ್ತ ಜಯಂತಿ ಮಾಡಿದ್ದು ನಾವು. ನೀವು ಏನ್ ಮಾಡಿದ್ದೀರಿ ಅಂತಾ ಬಿಜೆಪಿಗೆ ಪ್ರಶ್ನಿಸಿದರು.