ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದೆಹಲಿಯಲ್ಲಿ ಸ್ಥಾಪಿಸಲು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಮತ್ತು ಈ ಸಂಬಂಧ ಸಚಿವರ ಬಳಿ ಮಾತನಾಡಿ ಶೀಘ್ರ ಕ್ರಮಕ್ಕೆ ಕೇಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ವತಿಯಿಂದ ಖೋಡೆ ಸರ್ಕಲ್ನಲ್ಲಿ ಆಯೋಜಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225ನೇ ಜಯಂತ್ಯುತ್ಸವದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿಎಂ, ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಯಾವುದಾದರೂ ಒಂದು ಜಾಗ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಬಗ್ಗೆ ಸಂಬಂಧಿಸಿದಂತೆ ಸಚಿವರ ಬಳಿ ಮಾತನಾಡಿ ಶೀಘ್ರ ರಾಯಣ್ಣ ಮೂರ್ತಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.
ಸೆಪ್ಟೆಂಬರ್ ತಿಂಗಳಲ್ಲಿ ಪ್ರಥಮವಾಗಿ ಸಂಗೊಳ್ಳಿ ರಾಯಣ್ಣ ಮಿಲಿಟರಿ ಸ್ಕೂಲ್ ಆರಂಭಿಸಲಾಗುವುದು. ದೇಶಕ್ಕಾಗಿ ಏನಾದರೂ ಮಾಡಬೇಕು. ಜಾತಿ, ಮತ, ಪಂಥವನ್ನು ಲೆಕ್ಕಿಸದೆ ಸಂಕಲ್ಪ ಭಾವನೆಯಿಂದ ಯುವಕರು ದೇಶ ಕಟ್ಟಬೇಕು. ಮುಂದಿನ 25 ವರ್ಷಗಳಲ್ಲಿ ಭಾರತ ಜಗತ್ತಿಗೆ ನಂಬರ್ ಒನ್ ದೇಶವಾಗುತ್ತದೆ ಎಂದು ಸಿಎಂ ಭವಿಷ್ಯ ನುಡಿದರು.