ಕರ್ನಾಟಕ

karnataka

ETV Bharat / city

ಕೆಪಿಟಿಸಿಎಲ್, ಎಸ್ಕಾಂ ಹುದ್ದೆ ನಿರೀಕ್ಷೆಯಲ್ಲಿದ್ದ 2 ಲಕ್ಷ ಅಭ್ಯರ್ಥಿಗಳ ಭವಿಷ್ಯದ ಮೇಲೆ ತೂಗುಗತ್ತಿ: ಚಂದ್ರಶೇಖರ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಐದು ಎಸ್ಕಾಂಗಳಾದ ಬೆಸ್ಕಾಂ, ಸೆಸ್ಟ್, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂಗಳಲ್ಲಿನ 155 ವಿವಿಧ ಹುದ್ದೆಗಳ ನೇಮಕಾತಿಗೆ 2019 ರ ಫೆ.25 ರಂದು ಅಧಿಸೂಚನೆ ಹೊರಡಿಸಿದ್ದು, ಒಟ್ಟು 2,02,498 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದೀಗ ಸರ್ಕಾರ ಆಡಳಿತಾತ್ಮಕ ಕಾರಣವನ್ನು ಮುಂದಿಟ್ಟು ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿರುವುದು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯವನ್ನು ತೂಗುಗತ್ತಿಯ ಮೇಲೆ ನಿಲ್ಲಿಸಿದೆ ಎಂದು ರಾಜ್ಯಸಭಾ ಸದಸ್ಯ ಚಂದ್ರಶೇಖರ್​ ಹೇಳಿದ್ದಾರೆ.

ಚಂದ್ರಶೇಖರ್
ಚಂದ್ರಶೇಖರ್

By

Published : Dec 10, 2020, 6:51 AM IST

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಎಸ್ಕಾಂ ಹುದ್ದೆಗಳಿಗೆ ಕಳೆದ ಒಂದು ವರ್ಷದ ಹಿಂದೆ ಹೊರಡಿಸಿದ್ದ ನೋಟಿಫಿಕೇಶನ್​ಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ದಯವಿಟ್ಟು ಇತ್ತ ಗಮನಹರಿಸಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಉದ್ಯೋಗ ಪ್ರಕಟಣೆಗಳನ್ವಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಐದು ಎಸ್ಕಾಂಗಳಾದ ಬೆಸ್ಕಾಂ, ಸೆಸ್ಟ್, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂಗಳಲ್ಲಿನ 155 ವಿವಿಧ ಹುದ್ದೆಗಳ ನೇಮಕಾತಿಗೆ 2019 ರ ಫೆ.25 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಸಹಾಯಕ ಇಂಜಿನಿಯರ್ (ವಿದ್ಯುತ್) ಹುದ್ದೆಗೆ 22,170, ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗೆ 14,289, ಕಿರಿಯ ಇಂಜಿನಿಯರ್ (ವಿದ್ಯುತ್) ಹುದ್ದೆಗೆ 21,060, ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗೆ 8,332, ಕಿರಿಯ ಸಹಾಯಕ ಹುದ್ದೆಗೆ 1,36,647 ಮಂದಿ ಸೇರಿ ಒಟ್ಟು 2,02,498 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2020 ಮಾರ್ಚ್‌ನಲ್ಲಿ ಪರೀಕ್ಷೆ ನಡೆಸುವ ಭರವಸೆ ನೀಡಿದ್ದ ಸರ್ಕಾರ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆ ತಡೆಹಿಡಿದಿತ್ತು. ಇದೀಗ ಒಂದು ವರ್ಷದಿಂದ ಪರೀಕ್ಷೆ ನಡೆಸುವುದಾಗಿ ಹೇಳಿಕೊಂಡು ಬಂದಿದ್ದ ಸರ್ಕಾರ, ದಿಢೀರನೇ ಉಲ್ಲೇಖ (4) ಹಾಗೂ (5) ರ ಅನ್ವಯ ಆಡಳಿತಾತ್ಮಕ ಕಾರಣವನ್ನು ಮುಂದಿಟ್ಟು ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿರುವುದು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯವನ್ನು ತೂಗುಗತ್ತಿಯ ಮೇಲೆ ನಿಲ್ಲಿಸಿದೆ. ಒಂದು ವರ್ಷದಿಂದ ನಿರಂತರ ಅಭ್ಯಾಸ ನಡೆಸಿದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಅವರು ವಿವರಿಸಿದ್ದಾರೆ.

ಸಿಎಂಗೆ ಪತ್ರ ಬರೆದ ಜಿ.ಸಿ.ಚಂದ್ರಶೇಖರ್

ಈಗಾಗಲೇ ಕೊರೊನಾ ಹಿನ್ನೆಲೆ ಹೈರಾಣಾಗಿರುವ ಅಭ್ಯರ್ಥಿಗಳ ಪರ ನಿಲ್ಲುವುದು ಮಾನ್ಯ ಮುಖ್ಯಮಂತ್ರಿಗಳಾಗಿರುವ ನಿಮ್ಮ ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುವುದರಿಂದ ತಾವು ತಕ್ಷಣವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿ, ನೇಮಕಾತಿ ರದ್ದು ಆದೇಶವನ್ನು ತಡೆಹಿಡಿಯುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ಚಂದ್ರಶೇಖರ್​ ಮನವಿ ಮಾಡಿದ್ದಾರೆ.

ABOUT THE AUTHOR

...view details