ಬೆಂಗಳೂರು:ಕುಡಿಯುವ ನೀರಿಗಾಗಿ ಹೋರಾಡುತ್ತಿರುವ ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವ ರಾಜ್ಯಸರ್ಕಾರಕ್ಕೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ಹಾಗೂ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು, ಈ ಸಂದರ್ಭ ಬೆಂಗಳೂರಿನಲ್ಲಿ ಈಟಿವಿ ಭಾರತ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಮೇಕೆದಾಟು ಯೋಜನೆ ಹೋರಾಟ ಸಂಬಂಧಿ ಪಾದಯಾತ್ರೆ ಎರಡನೇ ಹಂತದ ನಡಿಗೆ ಆರಂಭವಾಗಿದೆ. ರಾಜ್ಯ ಸರ್ಕಾರ ನಮ್ಮ ಪಾದಯಾತ್ರೆ ತಡೆಗಟ್ಟಲು ಏನೆಲ್ಲಾ ಪ್ರಯತ್ನ ಮಾಡಬೇಕು ಅದನ್ನೇ ಮಾಡುತ್ತಿದೆ. ನಮ್ಮವರ ಮೇಲೆ ಈಗಾಗಲೇ ಐದಾರು ಕೇಸುಗಳನ್ನು ದಾಖಲಿಸಲಾಗಿದೆ. ನಿನ್ನೆಯೂ ಕೇಸುಗಳು ದಾಖಲಾಗಿವೆ. ನಾವು ಪಕ್ಷಾತೀತವಾಗಿ ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಎರಡುವರೆ ವರ್ಷವಾದರೂ ಸಹ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿಲ್ಲ. ಜಾರಿಗೆ ತರುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ. ಮೊದಲ ಹಂತದ ಪಾದಯಾತ್ರೆ ನಡೆಸಿ ಕೋವಿಡ್ ನಿರ್ಬಂಧದ ಹಿನ್ನೆಲೆ ನಿಲ್ಲಿಸಿದ್ದೆವು. ಇದೀಗ ಎರಡನೇ ಹಂತ ಆರಂಭಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರದ ಮಂತ್ರಿಗಳು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಇದಕ್ಕೆ ಜನರೇ ಸರಿಯಾದ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಯೋಜನೆಯನ್ನು ಜಾರಿಗೆ ತರಬೇಕಾದ ಜವಾಬ್ದಾರಿ ಅವುಗಳ ಮೇಲೆ ಇತ್ತು. ಆದರೆ ಮೂರು ವರ್ಷ ಕಳೆದರೂ ಇದುವರೆಗೂ ಜಾರಿಗೆ ತಂದಿಲ್ಲ. ಒಂದು ಮಹತ್ವದ ನೀರಾವರಿ ಯೋಜನೆ ಬಗ್ಗೆ ಚಿಂತನೆ ಮಾಡಿದ ನಿರ್ಜೀವ ಸರ್ಕಾರ ಇದಾಗಿದೆ. 25 ಸಂಸದರು ಹಾಗೂ ಕೇಂದ್ರ ಸಚಿವರು ಇದ್ದರೂ ಸಹ ಯೋಜನೆಗೆ ಕೇವಲ ಪರಿಸರ ಇಲಾಖೆಯ ಅನುಮತಿ ಪಡೆಯಲು ಸಾಧ್ಯವಾಗಿಲ್ಲ. ಪರವಾನಗಿ ಪಡೆಯುವ ಶಕ್ತಿ ಸರ್ಕಾರಕ್ಕೆ ಸಚಿವರಿಗೆ ಹಾಗೂ ಸಂಸದರಿಗೆ ಇಲ್ಲ. ಹಿನ್ನೆಲೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.