ಬೆಂಗಳೂರು:ದೇಶದ ಸ್ವಾತಂತ್ರ್ಯಕ್ಕಾಗಿ 2 ವರ್ಷ ಜೈಲು ಸೇರಿ, 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ, ಬಾಂಗ್ಲಾ ವಿಮೋಚನೆ, ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹುಕ್ಕಾ ಬಾರ್, ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ. ರವಿ ಹಾಗೂ ಬಿಜೆಪಿಯವರ ಸಂಸ್ಕೃತಿ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಬಡವರಿಗಾಗಿ ಹಸಿವು ನೀಗಿಸಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ಆದರೆ ಸಿ.ಟಿ. ರವಿ ಅವರು ಇಂದಿರಾಗಾಂಧಿ ಅವರ ಹೆಸರಲ್ಲಿ ಹುಕ್ಕಾ ಬಾರ್ ಬೇಕಾದರೆ ಮಾಡಿಕೊಳ್ಳಲಿ ಎಂದು ಆಡಿರುವ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಆಚಾರವಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ. ಇಂದಿರಾ ಗಾಂಧಿ ಅವರ ಹೆಸರನ್ನು ಹೇಳುವ ಯೋಗ್ಯತೆ ಬಿಜೆಪಿ ನಾಯಕರಿಗಿಲ್ಲ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯಾಗಲಿ, ಆರ್ಎಸ್ಎಸ್ ಆಗಲಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರು ಯಾರ ಜತೆ ಶಾಮೀಲಾಗಿದ್ದರು ಎಂಬುದನ್ನು ನೋಡಿದರೆ ಇವರ ಬಗ್ಗೆ ತಿಳಿಯುತ್ತದೆ. ಸಿ.ಟಿ ರವಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಇತಿ ಮಿತಿಯಲ್ಲಿ ಮಾತನಾಡಬೇಕು. ಇಂತಹ ಉದ್ಧಟತನದ ಮಾತುಗಳನ್ನು ನಿಲ್ಲಿಸಬೇಕು. ನಾವು ಅವರ ಮುಖಂಡರ ವಿರುದ್ಧ ಇದಕ್ಕಿಂತ ತೀಕ್ಷ್ಣವಾಗಿ ಮಾತನಾಡಲು ನಮಗೂ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕಾಂಗ್ರೆಸ್ ಆಫೀಸ್ನಲ್ಲಿ ಇಂದಿರಾ ಕ್ಯಾಂಟೀನ್, ನೆಹರು ಹುಕ್ಕಾ ಬಾರ್ ಮಾಡಲಿ: ಸಿಟಿ ರವಿ
ಸಿ.ಟಿ ರವಿ ಅವರಿಂದಾಗಲಿ, ಬಿಜೆಪಿಯವರಿಂದಾಗಲಿ ಈ ರಾಜ್ಯ ಹಾಗೂ ದೇಶಕ್ಕೆ ಯಾವುದೇ ಕೊಡುಗೆ ಇಲ್ಲ. ಐಪಿಎಸ್ ಹುದ್ದೆಯಲ್ಲಿದ್ದ ಅಣ್ಣಾ ಮಲೈ ಅವರನ್ನು ಹುದ್ದೆಯಿಂದ ಬಿಡಿಸಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅವರನ್ನು ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ರಾಜ್ಯದ ವಿರುದ್ಧ ನಿಲ್ಲುವಂತೆ ಮಾಡುತ್ತಿರುವುದು ಸಿ.ಟಿ ರವಿ ಅವರೇ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.