ಬೆಂಗಳೂರು:ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು 2ನೇ ದಿನವೂ ಮುಂದುವರಿಸಿರುವ ಮೌನ ಸತ್ಯಾಗ್ರಹದಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮೌನ ಪ್ರತಿಭಟನೆ ಆರಂಭವಾಗಿದೆ.
ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ಎನ್.ಚಂದ್ರಪ್ಪ, ಶಾಸಕ ಎನ್.ಎ.ಹ್ಯಾರಿಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ನಿನ್ನೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತರ ಪ್ರಮಾಣ ಇಂದು ಕಡಿಮೆಯಾಗಿದೆ. ಅಂದಾಜು ನೂರಿನ್ನೂರು ಕಾರ್ಯಕರ್ತರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ ಪ್ರತಿಭಟನೆ ಆರಂಭವಾಗಿ ಒಂದು ಗಂಟೆ ಕಳೆದಿದ್ದು ಇದುವರೆಗೂ ಯಾವ ನಾಯಕರೂ ಇತ್ತ ಮುಖ ಮಾಡಿಲ್ಲ. ಸಿದ್ದರಾಮಯ್ಯ ಜ್ವರದಿಂದ ಬಳಲುತ್ತಿದ್ದು ಇಂದು ಭಾಗಿಯಾಗುವುದು ಅನುಮಾನ ಎನ್ನಲಾಗುತ್ತಿದೆ. ಉಳಿದ ನಾಯಕರು ಕೊಂಚ ತಡವಾಗಿ ಆಗಮಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಮೌನ ಸತ್ಯಾಗ್ರಹ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ರಾಮಲಿಂಗಾ ರೆಡ್ಡಿ, "ಕರಾವಳಿಯಲ್ಲಿ ನಡೆದ ಕೊಲೆ ಪ್ರಕರಣ ಅಕ್ಷಮ್ಯ. 2017ರಲ್ಲಿ ನಾನು ಗೃಹ ಸಚಿವ ಆಗಿದ್ದಾಗ ರಿವ್ಯೂ ಮೀಟಿಂಗ್ ಮಾಡಿದ್ದೆ. ಕರಾವಳಿಯಲ್ಲಿ ಅನೇಕ ಕೊಲೆ ಆಗಿದ್ದವು. ಎರಡೂ ಕಡೆಯಿಂದಲೂ ಆಗಿದ್ದವು. ಕೋರ್ಟ್ನಲ್ಲಿ ಅವರ ಪರ ಇವರ ಪರ ಹೀಗೆ ವಾದಗಳು ಆಗಿದ್ದವು. ನಾಲ್ಕು ವರ್ಷದಿಂದ ಕೊಲೆಗಳು ನಿಂತಿದ್ದವು. ಆದರೆ ಈಗ ಮತ್ತೆ ಶುರುವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು. ಸೂಕ್ಷ್ಮ ಜಿಲ್ಲೆ ಅದು. ತುಂಬಾ ಎಚ್ಚರ ವಹಿಸಬೇಕು. ಬಿಜೆಪಿಯ ಎರಡ್ಮೂರು ಸಂಸ್ಥೆಗಳೂ ಇದರಲ್ಲಿವೆ. ನಾನು ಗೃಹ ಸಚಿವರಾಗಿದ್ದಾಗ ಮುಲಾಜಿಲ್ಲದೇ ಕ್ರಮ ತೆಗೆದುಕೊಂಡಿದ್ದೆ. ಗೃಹ ಮಂತ್ರಿಗಳು ಕೂಡಾ ಕ್ರಮಕ್ಕೆ ಮುಂದಾಗಲಿ" ಎಂದರು.
ಇದನ್ನೂ ಓದಿ:ನಾಳೆಯೂ ಮೌನ ಸತ್ಯಾಗ್ರಹ: ಎಲ್ಲ ಜಿಲ್ಲೆಗಳಲ್ಲೂ ನಡೆಸಲು ಡಿಕೆಶಿ ಸೂಚನೆ