ಬೆಂಗಳೂರು:ದೇಶದ ಶೇ.75ರಷ್ಟು ಜನರಿಗೆ ಉಚಿತವಾಗಿ ಲಸಿಕೆ ನೀಡುವ ಸರ್ಕಾರ, ಉಳಿದ ಶೇ.25ರಷ್ಟು ಜನರಿಗೆ ಏಕೆ ಖಾಸಗಿಯವರ ಮೂಲಕ ನೀಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರವೇ ಉಚಿತ ಲಸಿಕೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಓದಿ: ರಾಜ್ಯದಲ್ಲಿ ಡೆಲ್ಟಾ ಆಯ್ತು, ಇದೀಗ 'ಡೆಲ್ಟಾ ಪ್ಲಸ್' ವೈರಸ್ ಪತ್ತೆ!
ಕೇಂದ್ರ ಸರ್ಕಾರಕ್ಕೆ ಲಸಿಕೆ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಕೋವಿಡ್ ಮೊದಲ ಅಲೆ ಬಂದಾಗಲೇ ಸರ್ಕಾರ ಎಚ್ಚರವಹಿಸಬೇಕಿತ್ತು. ಲಸಿಕೆ ತಯಾರಿಕೆ ವಿಚಾರವಾಗಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿತ್ತು. ಲಸಿಕೆ ಉತ್ಪಾದಿಸಲು ಇತರ ಕಂಪನಿಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಎರಡನೇ ಅಲೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ಇದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.
ಬಿಹಾರ, ಪಶ್ಚಿಮ ಬಂಗಾಳ ಚುನಾವಣೆ ಸಮಯದಲ್ಲೂ ಬಿಜೆಪಿ ಸರ್ಕಾರ ಉಚಿತ ಲಸಿಕೆ ಘೋಷಿಸಿತ್ತು. ಆದರೆ, ನಂತರ ಮುಂಚೂಣಿ ವಾರಿಯರ್ಸ್, ಆನಂತರ ಹಿರಿಯರಿಗೆ, ತದನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಎಂದು ಘೋಷಿಸಿದ್ದರು. ವಿರೋಧ ಪಕ್ಷಗಳು, ಮಾಧ್ಯಮಗಳಿಂದ ವ್ಯಾಪಕ ಟೀಕೆ ಆರಂಭವಾದ ನಂತರ, ಲಸಿಕೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸದೇ ಪ್ರಧಾನಿಗಳು ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಘೋಷಿಸಿದರು ಎಂದು ವಾಗ್ದಾಳಿ ನಡೆಸಿದರು.
ಜವಾಬ್ದಾರಿ ಸ್ಥಾನದಲ್ಲಿ ಕೂತಿರುವ ಪ್ರಧಾನಿಗಳು ಲಸಿಕೆ ಲಭ್ಯತೆ ಬಗ್ಗೆ ಚಿಂತಿಸದೇ ಸಾಂಕೇತಿಕವಾಗಿ ಲಸಿಕೆ ಅಭಿಯಾನ ಆರಂಭಿಸಿದರು. ನಂತರ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ವಿವಿಧ ದರ ನಿಗದಿ ಮಾಡಿದರು.
ಕೋವ್ಯಾಕ್ಸಿನ್ ಬೆಲೆ ಒಂದು ಡೋಸ್ ಗೆ 900 ರಿಂದ 1200 ರೂ.ವರೆಗೂ ನಿಗದಿ ಮಾಡಲಾಯಿತು. ಆ ಮೂಲಕ ಒಬ್ಬ ವ್ಯಕ್ತಿ ಲಸಿಕೆ ಪಡೆಯಲು 1,800 ರಿಂದ 2,400 ರೂ. ವರೆಗೂ ವೆಚ್ಚ ಭರಿಸಬೇಕಾಯಿತು. ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗದಿದ್ದರೆ, ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಲಸಿಕೆ ಪೂರೈಕೆಯಾಗುತ್ತಿತ್ತು. ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡಿತ್ತು.
ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವೈದ್ಯಕೀಯ ಸಮಿತಿಯು ಆರೋಗ್ಯ ಮಂತ್ರಿಗಳಿಗೆ ನಿದ್ದೆಯಿಂದ ಎದ್ದೇಳಿ ಎಂದು ಪತ್ರ ಬರೆಯಲಾಯಿತು. ಇದೆಲ್ಲದರ ನಂತರ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಲಸಿಕೆಗಾಗಿ ಮೀಸಲಿಟ್ಟ 35 ಸಾವಿರ ಕೋಟಿ ಹಣದ ಲೆಕ್ಕ ಕೇಳಿದ ನಂತರ ಮೂರು ತಿಂಗಳ ಕಾಲ ಮನೆಯಿಂದಾಚೆಗೆ ಬಾರದ ಪ್ರಧಾನಿ ನರೇಂದ್ರ ಮೋದಿ ಅವರು 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಎಂದು ಘೋಷಿಸಿದರು ಎಂದರು.