ಬೆಂಗಳೂರು:ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಅಸಮಾಧಾನ ಅಥವಾ ಗೊಂದಲಗಳು ಇಲ್ಲ. ನಾನು ಯಾರ ಜತೆಗೂ ಕಲಹ ಮಾಡಿಲ್ಲ. ಆದರೆ ಇದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ನಾನು ಪಕ್ಷದ ಅಧ್ಯಕ್ಷನಾಗಿದ್ದು ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯಬೇಕಾದ ಜವಾಬ್ದಾರಿ ಇದೆ. ಏನಾದರೂ ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದರು.
ಇದನ್ನೂ ಓದಿ:ನಮ್ಮದು ಶಿಸ್ತಿನ ಪಕ್ಷ ಇವೆಲ್ಲಾ ಸಹಿಸಲ್ಲ: ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಜೋಶಿ ಪ್ರತಿಕ್ರಿಯೆ
ಇಂದು ನಡೆದ ಚರ್ಚೆಯ ಮುಖ್ಯ ವಿಚಾರವೆಂದರೆ, ಶೀಘ್ರವೇ ಉಪಚುನಾವಣೆ ಘೋಷಣೆ ಆಗಲಿದೆ. ನೋಟಿಫಿಕೇಶನ್ ಆಗುವುದು ಮಾತ್ರ ಬಾಕಿ ಇದೆ. ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಒಂದಷ್ಟು ಚರ್ಚೆ ನಡೆಸಬೇಕಿತ್ತು. ಇದರಿಂದಾಗಿ ಯಾವ್ಯಾವ ಕ್ಷೇತ್ರಗಳಿಗೆ ಯಾರನ್ನು ಉಸ್ತುವಾರಿಯಾಗಿ ನೇಮಿಸಿದ್ದೆವೋ ಅವರನ್ನು ಕರೆಸಿ ಚರ್ಚಿಸಿದ್ದೇವೆ ಎಂದು ವಿವರಿಸಿದರು.
'ಸಂಪೂರ್ಣ ವಿವರ ಗೊತ್ತಿಲ್ಲ'
ರಮೇಶ್ ಜಾರಕಿಹೊಳಿ ವಿಚಾರ ಮಾತನಾಡಿ, ನಾನು ವಿಡಿಯೋ ನೋಡಿಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇದ್ದಾಗ ಟಿವಿಯಲ್ಲಿ ವಿಡಿಯೋ ಕ್ಲಿಪ್ ನೋಡಿದ್ದೇನೆ. ಯಡಿಯೂರಪ್ಪ ಕರಪ್ಟ್ ಅಂತ ವಿಡಿಯೋನಲ್ಲಿ ಹೇಳಿರುವ ಬಗ್ಗೆ ಯಡಿಯೂರಪ್ಪ ಉತ್ತರ ಕೊಡಬೇಕು. ಆಡಳಿತ ಪಕ್ಷ ಏನ್ ಹೇಳುತ್ತೆ ನೋಡೋಣ. ಈ ಸರ್ಕಾರದಲ್ಲಿ ಇಂಥವರೆಲ್ಲಾ ಇರಬೇಕು. ನಾವೇಕೆ ರಾಜೀನಾಮೆ ಕೇಳೋಣ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಯವರು ಏನು ಹೇಳ್ತಾರೆ, ಯಾವ ಕ್ರಮ ಕೈಗೊಳ್ತಾರೆ ನೋಡೋಣ. ಅವರು ಮಾತನಾಡದಿದ್ರೆ ವಿಪಕ್ಷವಾಗಿ ನಾವು ಮಾತಾಡುತ್ತೇವೆ. ಎಲ್ಲಾ ವಿಚಾರವನ್ನು ತಿಳಿದುಕೊಳ್ಳುತ್ತೇನೆ. ಸಿಎಂ ಮೇಲೆ ಆರೋಪ ಇದೆ ಎಂದು ನೀವು ಹೇಳಿದ್ದೀರಾ? ನಾನು, ಸಿದ್ದರಾಮಯ್ಯ ಅವರು ಇದರ ಬಗ್ಗೆ ಎಲ್ಲಾ ಮಾತಾಡುತ್ತೇವೆ ಮುಂದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಮೇಶ್ ಜಾರಕಿಹೊಳಿ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.