ಬೆಂಗಳೂರು: ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಕೊಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗದ ಮುಖಾಂತರ ಪತ್ರ ಬರೆಯಲಾಗುತ್ತದೆ. ಕಾಂಗ್ರೆಸ್ನಿಂದ ನಾಮನಿರ್ದೇಶಿತರಾದ ಸದಸ್ಯರಿಗೆ ಮತದಾನ ಮಾಡದಂತೆ ಸೂಚನೆ ನೀಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಬೆಂಗಳೂರು ಅಭ್ಯರ್ಥಿಯಿಂದ ಈ ವಿಚಾರವಾಗಿ ಅರ್ಜಿ ಸಲ್ಲಿಸಿ, ನಾಮನಿರ್ದೇಶಿತರ ಹಕ್ಕು ಪ್ರಶ್ನಿಸಿ ಕೋರ್ಟ್ಗೆ ಹೋಗಿದ್ದೆವು. ಇದನ್ನು ಕೋರ್ಟ್ ಪೆಂಡಿಂಗ್ ಇಟ್ಟಿದೆ. 243ರ ಆ್ಯಕ್ಟ್ನಂತೆ ನಾಮನಿರ್ದೇಶನ ಮಾಡಲು ಸರ್ಕಾರಕ್ಕೆ ಹಕ್ಕಿದೆ. ಆದರೆ ಅವರು ಎಂಎಲ್ಸಿ ಚುನಾವಣೆಯಲ್ಲಿ ಮತ ಹಾಕಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಎಲ್ಲಾ 219 ಸ್ಥಳೀಯ ಸಂಸ್ಥೆಗಳಿಗೆ ಅನ್ವಯ ಮಾಡಬೇಕು. ಎಲ್ಲಾ ಕಡೆ ಐದೈದು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಇವರ ಮತದಾನದ ಹಕ್ಕನ್ನು ರದ್ದುಗೊಳಿಸಬೇಕೆಂದು ಆಗ್ರಹಿಸುತ್ತೇವೆ. ಕೋರ್ಟ್ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಬಿಪಿನ್ ರಾವತ್ ನಿಧನಕ್ಕೆ ಸಂತಾಪ:
ಬಿಪಿನ್ ರಾವತ್ ದೇಶದ ದೊಡ್ಡ ಹುದ್ದೆಯನ್ನು ಹೊಂದಿದ್ದವರು. ದೇಶ ರಕ್ಷಣೆ ಮಾಡುತ್ತಿದ್ದ ಸೈನಿಕರ ನಾಯಕ. ಇಂತಹ ಅಪಘಾತ ಆಗಿದ್ದು ದೊಡ್ಡ ನಷ್ಟ. ಅವರ ಕುಟುಂಬವಷ್ಟೇ ಅಲ್ಲ, ಎಲ್ಲರಿಗೂ ನಷ್ಟ. ಮೂರೂ ಸೈನಿಕ ವಿಭಾಗಕ್ಕೂ ತುಂಬಲಾರದ ನಷ್ಟ. ದೇಶದ ನಾಗರಿಕರಿಗೆ ದುಃಖವಾಗಿದೆ. ಅವರ ದುಃಖದಲ್ಲಿ ನಾವು ಸೇರಿದ್ದೇವೆ ಎಂದು ಡಿಕೆಶಿ ಹೇಳಿದರು.