ಬೆಂಗಳೂರು:ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತುಂಬಾ ದೊಡ್ಡ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಕಾಲಘಟ್ಟದ ಒಬ್ಬ ನಾಗರಿಕ ಹಾಗೂ ಸ್ಥಳೀಯ ಪ್ರತಿನಿಧಿ. ಅಲ್ಲಿನ ಜನ ನನಗೆ ಯಾವ ಅಧಿಕಾರ ಕೊಟ್ಟಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಡಾ. ಅಶ್ವತ್ಥ್ ನಾರಾಯಣ್ ಅವರಿಗೆ ಯಾವ ಅಧಿಕಾರ ಕೊಟ್ಟಿದೆ ಎನ್ನುವುದೂ ಅವರಿಗೆ ಗೊತ್ತಿದೆ. ಅವರು ಬಹಳ ದೊಡ್ಡವರಿದ್ದಾರೆ. ನಮ್ಮ ಜನರನ್ನು ಉಳಿಸಿಕೊಳ್ಳಲು ನಾನು ಯಾವ ಡ್ಯೂಟಿ ಮಾಡಬೇಕೋ ಮಾಡಿದ್ದೇನೆ. ಜನರ ಸಲಹೆ ಹಾಗೂ ಭಾವನೆಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಅಶ್ವತ್ಥ್ ನಾರಾಯಣ್ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಲಿ. ಅವರು ಆದಷ್ಟು ಬೇಗ ತಮ್ಮ ಎಪಿಸೋಡ್ ಬಿಡುಗಡೆ ಮಾಡಲಿ ಎಂದರು.
ಬೆಂಗಳೂರಿನಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರದ ಯಾವುದೇ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ನಮ್ಮನ್ನು ಕೇಳಿದರೆ ಅಗತ್ಯ ಸಲಹೆ ಬೇಕಾದರೆ ನೀಡುತ್ತೇವೆ. ಇದನ್ನು ಹೊರತುಪಡಿಸಿ ಸರ್ಕಾರವಿದೆ ಹಾಗೂ ಅದರ ಆದೇಶವಿದೆ. ಇದರ ಮಧ್ಯೆ ನಾವು ಹೋಗಲ್ಲ. ಸರ್ಕಾರ ಜನರ ಜವಾಬ್ದಾರಿ ನೋಡಿಕೊಳ್ಳುತ್ತೆ ಎಂದರು.
ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ತಮಗೆ ಊಟ ಸಿಗುತ್ತಿಲ್ಲ ಎಂದು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕೂಡ ಸರ್ಕಾರದ ಜೊತೆ ಇದೇ ವಿಚಾರವಾಗಿ ಚರ್ಚಿಸಿದ್ದೇನೆ. ಊಟ ಹಾಗೂ ಸೌಕರ್ಯದ ವಿಚಾರವಾಗಿಯೇ ಮಾತನಾಡಿದ್ದೇವೆ. ಸರ್ಕಾರ ಕೋವಿಡ್ ರೋಗಿಗಳ ಆಹಾರಕ್ಕಾಗಿ 60 ರೂಪಾಯಿ ವೆಚ್ಚ ಮಾಡುತ್ತಿದೆ. ನಾವು ಅದಕ್ಕೆ 100 ರೂಪಾಯಿ ಸೇರಿಸಿ ಕೊಡಲು ನಿರ್ಧರಿಸಿದ್ದೇವೆ. ಒಟ್ಟು 160 ರೂಪಾಯಿಯಲ್ಲಿ ಸರ್ಕಾರ ಪೌಷ್ಟಿಕ ಆಹಾರ ನೀಡುವ ಕಾರ್ಯ ಮಾಡಲಿ ಎಂದರು.