ಬೆಂಗಳೂರು :ಕಾಂಗ್ರೆಸ್ ಪಕ್ಷದ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಶಿಸ್ತು ಪಾಲನಾ ಸಮಿತಿ ರಚಿಸಲಾಗಿದೆ. ಇದು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಉಗ್ರಪ್ಪ-ಸಲೀಂ ಸಂಭಾಷಣೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು.. ಬೆಂಗಳೂರಿನ ರವೀಂದ್ರ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಮಾಧ್ಯಮಗೋಷ್ಠಿ ಸಂದರ್ಭ ನಡೆದ ಸಂಭಾಷಣೆಯನ್ನು ನಾನು ಅಲ್ಲಗಳೆಯುವುದಿಲ್ಲ. ಅವರ ಮಾತನ್ನು ನಾನು ಮರೆಮಾಚುವುದಿಲ್ಲ. ಉಗ್ರಪ್ಪ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.
ನಾನು ಮಾಧ್ಯಮಗಳ ತಪ್ಪು ಎಂದು ಹೇಳುವುದಿಲ್ಲ. ನಾವು ಮಾತನಾಡಿರುವುದನ್ನು ನೀವು ತೋರಿಸಿದ್ದೀರಿ. ಹಿಂದೆ ಬಿಜೆಪಿ ನಾಯಕರು ಮಾತನಾಡಿರುವುದನ್ನು ನೀವು ತೋರಿಸಿದ್ದೀರಿ. ಇವರು ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಇವರು ಮಾಡಿರುವ ಆರೋಪಗಳಿಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.
ಪಕ್ಷ ಸುಮ್ಮನೆ ಕೂರುವುದಿಲ್ಲ
ಇಲ್ಲಿ ಪಕ್ಷದ ರಾಜ್ಯ ನಾಯಕರ ನಡುವಿನ ಗೊಂದಲ ಅಥವಾ ಜಗಳದ ವಿಚಾರವಾಗಲಿ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿಯೂ ಶಿಸ್ತು ಪಾಲನಾ ಸಮಿತಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಬಹಿರಂಗ ಹೇಳಿಕೆ ನೀಡುವುದಕ್ಕೆ ಯಾವುದೇ ಅವಕಾಶ ಇಲ್ಲ. ಇದಕ್ಕೆ ತಾವು ಅವಕಾಶವನ್ನು ಸಹ ಕೊಡುವುದಿಲ್ಲ.
ನಿನ್ನೆ ನಡೆದ ಸಂಭಾಷಣೆಗೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಚಪ್ಪಾಳೆ ಹೊಡೆಯುವರು ಇರುತ್ತಾರೆ. ಚಪ್ಪಲಿ, ಮೊಟ್ಟೆ, ಕಲ್ಲೆಸೆಯುವವರು ಇರುತ್ತಾರೆ. ಹೂ ಮಾಲೆ ಹಾಕುವವರೂ ಇರುತ್ತಾರೆ. ಇವರು ಯಾರು ಎನ್ನುವುದನ್ನು ನೀವೇ ತೀರ್ಮಾನಿಸಿ.
ನಾನು ಇಂದು ಇಂಧನದ ವಿಚಾರವಾಗಿ ಮಾತನಾಡಬೇಕು ಎಂದುಕೊಂಡಿದ್ದೆ. ಖಂಡಿತವಾಗಿಯೂ ಇಂತಹ ಸನ್ನಿವೇಶದಿಂದ ಪಕ್ಷಕ್ಕೂ ಹಾಗೂ ತಮಗೂ ಮುಜುಗರ ಆಗಿದೆ. ಇಲ್ಲ ಎಂದು ಹೇಳುವುದಿಲ್ಲ. ಸಿದ್ದರಾಮಯ್ಯ ಅಥವಾ ಪರಮೇಶ್ವರ್ ವಿಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಡಿಕೆಶಿ ಸ್ಪಷ್ಟೀಕರಣ ನೀಡಿದರು.
ತಪ್ಪಿತಸ್ಥರ ವಿರುದ್ಧ ಕ್ರಮ
ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷರಾದ ರೆಹಮನ್ ಖಾನ್ ಕರುಣೆ ರಹಿತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರವಾಗಿ ಮುಂದೆ ಯಾವುದೇ ಹೇಳಿಕೆಯನ್ನು ಪಕ್ಷದ ನಾಯಕರು ನೀಡುವುದಿಲ್ಲ. ಸಮಿತಿ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ನನ್ನ ವಿರುದ್ಧ ಯಾವುದೇ ಷಡ್ಯಂತ್ರ ನಡೆಯುತ್ತಿಲ್ಲ
ಒಬ್ಬ ಮಂತ್ರಿ ಭ್ರಷ್ಟಾಚಾರದ ವಿಚಾರವಾಗಿ ಬೆಡ್ ರೂಂನಲ್ಲಿ ಆಡಿದ ಮಾತನ್ನು ಮಾಧ್ಯಮಗಳೇ ಪ್ರಶ್ನಿಸಲಿಲ್ಲ. ಆದರೆ, ಇದನ್ನು ಯಾಕೆ ದೊಡ್ಡ ವಿಷಯ ಮಾಡುತ್ತೀರಿ. ಪಕ್ಷದಲ್ಲಿ ನನ್ನ ವಿರುದ್ಧ ಯಾವುದೇ ಷಡ್ಯಂತ್ರ ನಡೆಯುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಬೇಡ. ನಾನು ಹಳ್ಳಿಯಿಂದ ಬಂದಿರುವವನು. ನನ್ನತನ ಹಾಗೂ ನನ್ನ ಶೈಲಿ ಇದೆ. ನನ್ನದೇ ಆದ ಯಶಸ್ಸು ಇದೆ.
ಅದನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಜನತೆ ಹಾಗೂ ಅವರು ನೀಡುವ ಮತವೇ ನನ್ನ ತಕ್ಕಡಿ. ನಿಜವಾದ ತಕ್ಕಡಿ ಹಿಡಿಯುವವರು ಜನ ಎಂದು ಹೇಳಿದರು. ಬಿಜೆಪಿ ಬದುಕಿರುವುದೇ ಭ್ರಷ್ಟಾಚಾರ ಹಾಗೂ ಸುಳ್ಳು ಹೇಳುವ ಮೂಲಕ. ಬಿಜೆಪಿಯವರು ಭ್ರಷ್ಟಾಚಾರದ ಸಂಸ್ಥಾಪಕರು ಎಂದು ಡಿ ಕೆ ಶಿವಕುಮಾರ್ ಆರೋಪಿಸಿದರು.
ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಕುರಿತ ಉಗ್ರಪ್ಪ-ಸಲೀಂ ಸಂಭಾಷಣೆಯ ವಿಡಿಯೋ