ಬೆಂಗಳೂರು:ಕೊರೊನಾ ಸಮಯದಲ್ಲಿ ಸಿಎಂ 1,600 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದು ಯಾವ್ಯಾವ ಕ್ಷೇತ್ರಗಳಿಗೆ ತಲುಪಿದೆ ಎಂದು ದಾಖಲೆ ನೀಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
1,600 ಕೋಟಿ ಪ್ಯಾಕೇಜ್ ಲೆಕ್ಕ ಕೇಳಿದ ಡಿಕೆಶಿ.. ಅಧಿವೇಶನದಲ್ಲಿ ದಾಖಲೆ ನೀಡಲು ಒತ್ತಾಯ - ಬಿಎಸ್ವೈಗೆ ಡಿಕೆಶಿ ಪ್ರಶ್ನೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿವೇಶನದ ಪ್ರಾರಂಭದಲ್ಲಿ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ. ಯಾವ್ಯಾವ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಈ ಎಲ್ಲಾ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಸಿಎಂ 1,600 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದು ಯಾವ್ಯಾವ ಕ್ಷೇತ್ರಗಳಿಗೆ ತಲುಪಿದೆ. ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ. ಯಾವ್ಯಾವ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿವೇಶನದ ಪ್ರಾರಂಭದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ 25 ಬಿಜೆಪಿ ಸಂಸದ ಕರೆದುಕೊಂಡು ಸಿಎಂ ನಿನ್ನೆ ದೆಹಲಿಗೆ ಹೋಗಬೇಕಿತ್ತು. ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ಎಂದು ನಾವು ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನಮ್ಮ ಮನವಿಗೆ ಸಿಎಂ ಯಡಿಯೂರಪ್ಪ ಸ್ಪಂದಿಸಿಲ್ಲ. ಅವರೊಬ್ಬರೇ ಕೇಂದ್ರದ ಮಂತ್ರಿಗಳು ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂದು ಸಿಎಂ ಹೇಳಬೇಕು ಎಂದು ಆಗ್ರಹಿಸಿದರು.